ಕಾಫಿ ತೋಟದ ರೈಟರ್ ಮೇಲೆ ಆನೆ ದಾಳಿ: ಸೊಂಡಿಲಿನಲ್ಲಿ ಎತ್ತಿ ಎಸೆದ ಒಂಟಿ ಸಲಗ

ಹಾಸನ: ಕಾಫಿ ತೋಟದ ರೈಟರ್ ಒಬ್ಬರನ್ನು ಕಾಡಾನೆ ಸೊಂಡಿಲಿನಿಂದ ಹಿಡಿದೆತ್ತಿ ಎಸೆದು ಗಾಯಗೊಳಿಸಿರುವ ಘಟನೆ ಬೇಲೂರು ತಾಲ್ಲೂಕಿನ, ಅರೇಹಳ್ಳಿ ಹೋಬಳಿ, ವಾಟೆಹಳ್ಳಿ ಗ್ರಾಮದಲ್ಲಿ ನಡೆದಿದೆ.

ಐಬಿಸಿ ಎಸ್ಟೇಟ್‌ನ ರೈಟರ್ ಲಕ್ಷ್ಮಣ (46) ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರಿಗೆ ಬೇಲೂರು ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾಫಿ ತೋಟದಲ್ಲಿ ಕೆಲಸ ನಿರ್ವಹಣೆ ಸಮಯದಲ್ಲಿ ಏಕಾಏಕಿ ದಾಳಿ ಮಾಡಿದ ಒಂಟಿಸಲಗ ಸೊಂಡಿಲಿನಿಂದ ಎತ್ತಿ ಲಕ್ಷ್ಮಣ ಅವರನ್ನು ಬೀಸಾಡಿದೆ. ಸ್ವಲ್ಪದರಲ್ಲೇ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.