ದೇವೇಗೌಡರು ಇಲ್ಲದಿದ್ದರೆ ಶಿವಲಿಂಗೇಗೌಡರು ಎಂಎಲ್‌ ಎ ಆಗ್ತಿರಲಿಲ್ಲ ಎನ್ನುವ ಋಣ ನೆನಪಿಟ್ಟುಕೊಂಡು ಮಾತಾಡಲಿ: ಪ್ರಜ್ವಲ್‌ ರೇವಣ್ಣ ಗುಡುಗು

ಕಾಂಗ್ರೆಸ್‌ ಮುಖಂಡರ ವಿರುದ್ಧ ಹರಿಹಾಯ್ದ ರೇವಣ್ಣ; ಸೋಮಾರಿ ಸಂಸದ ಎಂದು ಜರಿದವರಿಗೆ ತಿರುಗೇಟು

ಹಾಸನ: ಕಾಂಗ್ರೆಸ್ ಶಾಸಕರ ವಿರುದ್ಧ ಸಂಸದ ಪ್ರಜ್ವಲ್‌ರೇವಣ್ಣ ಹರಿಹಾಯ್ದಿದ್ದಾರೆ.
ಸೋಂಬೇರಿ ಸಂಸದ, ಫೋನ್ ರಿಸೀವ್ ಮಾಡಲ್ಲ ಎಂದು ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಜರಿದಿದ್ದ ಶಾಸಕರಾದ ಕೆ.ಎಂ.ಶಿವಲಿಂಗೇಗೌಡ ಹಾಗೂ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದ ಸಂಸದ ಪ್ರಜ್ವಲ್‌ರೇವಣ್ಣ, ನನಗೆ ಅವರು ಯಾವಾಗ ಫೋನ್ ಮಾಡಿದ್ರು?
ಅರಸೀಕೆರೆಯಲ್ಲಿ 23 ಪಂಚಾಯ್ತಿಗೆ ಹೋಗಿದ್ದೇನೆ.‌ ಇವರು ನನ್ನ ಬಗ್ಗೆ ಮಾತನಾಡುವುದಲ್ಲ, ಅವರ ವೈಯುಕ್ತಿಕ ಮಾತನಾಡಿಕೊಳ್ಳಲಿ ಎಂದು ಎಚ್ಚರಿಸಿದರು.
ದೇವೇಗೌಡರ ಬಗ್ಗೆ ಕೀಳಾಗಿ ಮಾತಾಡುತ್ತಾರೆ. ದೇವೇಗೌಡರು ಇಲ್ಲದಿದ್ದರೆ ಶಿವಲಿಂಗೇಗೌಡರು ಎಂಎಲ್‌ಎ ಆಗ್ತಿರಲಿಲ್ಲ ಎನ್ನುವ ಋಣ ನೆನಪಿಟ್ಟುಕೊಂಡು ಮಾತಾಡಲಿ.
ಇವತ್ತು ಕಾಂಗ್ರೆಸ್‌ಗೆ ಹೋಗಿದಿನಿ, ಜೆಡಿಎಸ್ ನವರನ್ನು ಬೈದರೆ ಕಾಂಗ್ರೆಸ್ ಹೈಕಮಾಂಡ್ ಕೆಲಸ ಮಾಡಿಕೊಡ್ತಾರೆ ಎನ್ನುವ ಉಪಾಯವಿದ್ದರೆ ಅದನ್ನು ಬಿಟ್ಟು ಮೊದಲು ಸಾರ್ವಜನಿಕರನ್ನು ನೋಡಲಿ, ಹಾಸನದಲ್ಲಿ ಕೂತ್ಕಂಡು ಲೂಟಿ ಹೊಡೆಯುವುದಲ್ಲ ಎಂದು ತಿರುಗೇಟು ನೀಡಿದರು.
ನಾಲ್ಕು ತಿಂಗಳಿನಿಂದ ಎಷ್ಟು ರೂಪಾಯಿ ತಂದಿದ್ದಾರೆ? ಯಾವ ಯೋಜನೆ ತಂದಿದ್ದಾರೆ? ಇವರ ಬಗ್ಗೆ ಮಾತನಾಡಿಕೊಳ್ಳಲು ನನಗೆ ಟೈಂ ಇಲ್ಲಾ
ಅವರ ಮೀಟಿಂಗ್‌ನಲ್ಲಿ ಕಾಂಗ್ರೆಸ್ ಬಗ್ಗೆ ಮಾತನಾಡಲಿ ನಮ್ಮ ಬಗ್ಗೆ ಅಲ್ಲ. ಶಿವಲಿಂಗೇಗೌಡರು ಒಂದು ವರ್ಷದ ಹಿಂದೆ ಕಾಂಗ್ರೆಸ್‌ನವರನ್ನು ಬೈತಿದ್ದರು. ಇವರ ಥರ ಬಣ್ಣ ಬದಲಾಯಿಸಲು ನಮಗೆ ಆಗಲ್ಲ. ಇವರು ಟೈಂ ಟು ಟೈಂ ಅವರ ಸ್ವಾರ್ಥಕ್ಕೆ, ಅನುಕೂಲಕ್ಕೆ ಬಣ್ಣ ಬದಲಾಯಿಸುವ ಕೆಲಸ ಮಾಡ್ತಾರೆ, ನಾವು ಮಾಡಲ್ಲ. ನಾನು 357 ಪಂಚಾಯ್ತಿಯಲ್ಲಿ 197 ಪಂಚಾಯ್ತಿಗೆ ಹೋಗಿದ್ದೇನೆ ಯಾವ ಎಂಪಿ ಹೋಗಿದ್ದಾರೆ ಎಂದು ತಿಳಿದುಕೊಂಡು ಬರಲಿ ಎಂದರು.
ಮಾಜಿ ಎಂಎಲ್‌ಸಿ ಎಂ.ಎ.ಗೋಪಾಲಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸಂಸದ ಪ್ರಜ್ವಲ್‌ರೇವಣ್ಣ, ನಾನು ಮೀಟಿಂಗ್ ಮಾಡುವ ಹಾಗಿಲ್ಲ ಅಂತ ಯಾರು ಹೇಳಿದ್ದಾರೆ? ಅವರಿಗೆ ಕಾನೂನು ಗೊತ್ತಿದೆಯಾ? ನಾನು ನಾನು ಅಫಿಶಿಷಯಲ್ ಆಗಿ ಮೀಟಿಂಗ್ ಮಾಡ್ತಿದ್ದೀನಿ, ಸಭೆ ಮಾಡ್ತಿನಿ, ಅವರಿಗೇನು? ಎಂದು ಪ್ರಶ್ನಿಸಿದರು.
ನಾನು ಸಾರ್ವಜನಿಕವಾಗಿ ಕೆಲಸ ಮಾಡಲು ಹೋಗ್ತಿದ್ದೀನಿ ಅದನ್ನು ಕಟ್ಕಂಡು ಇವರಿಗೇನು? ಎಂಎಲ್‌ಸಿ ಆದಾಗ ಎಷ್ಟು ತಾಲ್ಲೂಕಿಗೆ ಹೋಗಿದ್ರು? ಒಬ್ಬ ಎಂಎಲ್‌ಸಿ ಆಗಿ ಚನ್ನರಾಯಪಟ್ಟಣದಿಂದ ಆಚೆ ಬರ್ಲಿಲ್ಲಾ, ಇವರು ನನ್ನ ಬಗ್ಗೆ ಮಾತನಾಡ್ತಾರೆಯೇ?
ಅವರದ್ದೆಷ್ಟೋ ಅಷ್ಟು ಮಾಡಿಕೊಳ್ಳಲಿ, ಯಾರೋ ಮುಂದೆಯೋ ಸ್ಕೋಪ್ ತೆಗದುಕೊಳ್ಳಲೆಂದು ಭಾಷಣ ಬಿಗುದ್ರೆ, ನಮಗೂ ಭಾಷಣ ಬಿಗಿಯಕೆ ಬರುತ್ತೆ.
ನಾನು ಸಭೆ ಮಾಡಲು ಪಂಚಾಯ್ತಿ, ಸಿಇಓ ಹಣ ಕೊಟ್ಟಿದ್ದಾರಾ? ಸಭೆ ನಡೆಯುವಲ್ಲಿನ ಜನ, ಕಾರ್ಯಕರ್ತರು ದುಡ್ಡು ಹಾಕುತ್ತಿದ್ದಾರೆ. ನಾನು ಯಾರ ಮನೆಗೂ ಹೋಗಿಲ್ಲ, ಈಗ ಮಾತಾಡುತ್ತಿರುವ
ಶಿವಲಿಂಗೇಗೌಡರು ನಮ್ಮ ಪಾರ್ಟಲಿ ನಿಂತಿದ್ದಾಗ ನಮ್ಮನ್ನೆಲ್ಲ ಬೇಡಿಕೊಳ್ಳುತ್ತಿರಲಿಲ್ವಾ? ಇವತ್ತು ಯಾರ ಮನೆಯಲ್ಲಿ ಬೇಡಿಕೊಳ್ಳುತ್ತಿದ್ದಾರೆ? ಎಲೆಕ್ಷನ್‌ಗಿಂತ ಮುಂಚೆ ಯಾರನ್ನು ಬೇಡಿಕೊಂಡಿದ್ರು?
ಸುಮ್ಮನೆ ಆರೋಪ ಮಾಡಲು ಹೋಗಿ ಹಳ್ಳ ತೋಡಿಕೊಳ್ಳುವುದು ಬೇಡ, ಬೇರೆಯವರಿಗೆ ಒಂದು ಬೆರಳು ತೋರಿಸಿದರೆ, ನಾಲ್ಕು ಬೆರಳು ನಮ್ಮೆಡೆಗೇ ತೋರಿಸುತ್ತವೆ ಎಂದರು.
ಇವತ್ತು ಸಾರ್ವಜನಿಕರಿಗೆ ಏನು ತೊಂದರೆ ಆಗ್ತಿದೆ ಅನ್ನೋದನ್ನ ಚರ್ಚೆ ಮಾಡ್ತಿಲ್ಲ, ಅದನ್ನು ಬಿಟ್ಟು ಎಂಪಿಯವರು ಏನು ಮಾಡ್ತಿದ್ದಾರೆ ಅಂತ ಚರ್ಚೆ ಮಾಡ್ತಿದ್ದಾರೆ. ಅದನ್ನು ಬಿಡ್ರಿ ನಿಮಗೆ ಯಾಕೆ ತಲೆನೋವು? ಸಾರ್ವಜನಿಕರು ಮತ ಹಾಕುವ ಸಂದರ್ಭದಲ್ಲಿ ಅಳೆದು ತೂಗಿ ಮತ ಹಾಕ್ತಾರೆ. ನನ್ನ ಬಗ್ಗೆ ಚರ್ಚೆ ಮಾಡಲು ನೀವ್ಯಾರೂ ಜಡ್ಜ್ ಅಲ್ಲ. ಜನರು ನನ್ನ ಬಗ್ಗೆ ತೀರ್ಮಾನ ಮಾಡ್ತಾರೆ ನಾನು ಬೇಕೋ, ಬೇಡ್ವೋ ಅಂತ ಜನ ತೀರ್ಮಾನ ಮಾಡ್ತಾರೆ ಎಂದರು.