ಅರಿವಳಿಕೆ ಚುಚ್ಚುಮದ್ದು ತಾಕಿದ ತಕ್ಷಣ ಕುಸಿದುಬಿದ್ದು ಪ್ರಾಣ ಬಿಟ್ಟ ಅಸ್ವಸ್ಥ ಹೆಣ್ಣಾನೆ

ಮೂಕ ಭಾಷೆಯಲ್ಲಿ ಸೊಂಡಿಲು ಹಾಗೂ ಮುಂದಿನ ಎಡಗಾಲನ್ನು ಹಿಂದೆ ಮುಂದೆ ಆಡಿಸುತ್ತಾ ನರಳಾಡುತ್ತಿದ್ದ ಕಾಡಾನೆ ಆಹಾರವಿಲ್ಲದೆ ತೀವ್ರ ನಿತ್ರಾಣಗೊಂಡಿತ್ತು.

ಹಾಸನ: ತೀವ್ರ ಅನಾರೋಗ್ಯದಿಂದ ನರಳುತ್ತಿದ್ದ ಕಾಡಾನೆ ಅರಣ್ಯ ಇಲಾಖೆ ಚಿಕಿತ್ಸೆ ಆರಂಭಿಸುವ ಮುನ್ನವೇ ಸಾವಿಗೀಡಾಗಿದೆ.

ಬೇಲೂರು ತಾಲ್ಲೂಕಿನ, ಸಿರಗುರ ಗ್ರಾಮದ ದೀಪಕ್ ಎಂಬವರ ಕಾಫಿ ತೋಟದಲ್ಲಿ ಮೂರು ದಿನಗಳಿಂದ ನಿಂತಲ್ಲಿಯೇ ನಿಂತು, ಆಹಾರ ತ್ಯಜಿಸಿ ಅನಾರೋಗ್ಯದಿಂದ ನರಳಾಡಿದ್ದ ಹೆಣ್ಣಾನೆಗೆ ಚಿಕಿತ್ಸೆ ನೀಡುವಂತೆ ಸಾರ್ವಜನಿಕರು ಆಗ್ರಹಿಸಿದ್ದರು.

ಮೂಕ ಭಾಷೆಯಲ್ಲಿ ಸೊಂಡಿಲು ಹಾಗೂ ಮುಂದಿನ ಎಡಗಾಲನ್ನು ಹಿಂದೆ ಮುಂದೆ ಆಡಿಸುತ್ತಾ ನರಳಾಡುತ್ತಿದ್ದ ಕಾಡಾನೆ ಆಹಾರವಿಲ್ಲದೆ ತೀವ್ರ ನಿತ್ರಾಣಗೊಂಡಿತ್ತು.

ಅರಣ್ಯ ಇಲಾಖೆ ಚಿಕಿತ್ಸೆ ಆರಂಭಿಸಿಲ್ಲ ಎಂದು ಬುಧವಾರ ಸ್ಥಳೀಯರು ಅಸಮಾಧಾನ ಹೊರ ಹಾಕಿದ್ದರು.

ಇಂದು ಸ್ಥಳಕ್ಕೆ ದೌಡಾಯಿಸಿದ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ವೈದ್ಯರು ಚಿಕಿತ್ಸೆ ನೀಡಲು ಅರವಳಿಕೆ ಚುಚ್ಚುಮದ್ದು ನೀಡುತ್ತಲೇ ಕುಸಿದು ಬಿತ್ತು, ಸಮೀಪಕ್ಕೆ ಹೋಗಿ ಪರಿಶೀಲಿಸಿದಾಗ ಆನೆ ಕೊನೆಯುಸಿರೆಳೆದಿತ್ತು.

ಸಮಸ್ಯೆ ಏನೆಂದು ಗುರುತಿಸಿ ಚಿಕಿತ್ಸೆ ನೀಡಲು ವಿಳಂಬ ಮಾಡಿದ್ದೇ ಆನೆ ಸಾವಿಗೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.