ಹಾಸನ: ನಮ್ಮೂರಿನಲ್ಲಿರುವ ರಾಮನನ್ನು ಪೂಜೆ ಮಾಡಿದ್ರೆ ನಮಗೆ ರಾಮ ಆಶೀರ್ವಾದ ಮಾಡೋದಿಲ್ವಾ?
ಹೀಗೆಂದು ಪ್ರಶ್ನಿಸಿದವರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ.
ರಾಮಮಂದಿರ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಹ್ವಾನ ನೀಡದಿರುವ ವಿಚಾರಕ್ಕೆ ಮಂಗಳವಾರ ಪ್ರತಿಕ್ರಿಯಿಸಿದ ಅವರು,
ಬಿಜೆಪಿಯವರದ್ದೇ ಒಂದು ಅಜೆಂಡಾ ಇರುತ್ತದೆ. ಯಾರನ್ನು ಕರೆಯಬೇಕು, ಯಾರನ್ನ ಕರೆಯಬಾರದು ಎನ್ನುವುದೆಲ್ಲಾ ಇರ್ತಾವೆ ಎಂದರು.
ಬಿಜೆಪಿ ಅಜೆಂಡಾನಾ ನಾವೇಕೆ ಪ್ರಶ್ನೆ ಮಾಡಲು ಹೋಗಬೇಕು? ಅಲ್ಲಿ ರಾಮಮಂದಿರಕ್ಕೆ ಹೋಗಿ ರಾಮನ ದರ್ಶನ ಮಾಡಿ, ರಾಮನ ಪೂಜೆ ಮಾಡಿದರೆ ಮಾತ್ರ ಆಶೀರ್ವಾದನಾ? ಅಲ್ಲೇ ಹೋಗಿ ಪೂಜೆ ಮಾಡಬೇಕಾ?
ದೇವರು ಸರ್ವಾಂತರಯಾಮಿ, ಎಲ್ಲಾ ಕಡೆ ಇದ್ದಾನೆ. ನಮ್ಮಲ್ಲೂ ಇದ್ದಾನೆ, ನಿಮ್ಮಲ್ಲೂ ಇದ್ದಾನೆ, ಎಲ್ಲಾ ಜಾಗದಲ್ಲೂ ಇದ್ದಾನೆ. ನಾವು ತೃಪ್ತಿಗೆ, ಮನಸ್ಸಿನ ನೆಮ್ಮದಿಗೆ ದೇವಸ್ಥಾನಕ್ಕೆ ಹೋಗೋದು.
ಅವರವರ ನಂಬಿಕೆಗೆ ಅನುಗುಣವಾಗಿ ಅವರವರು ನಡೆದುಕೊಳ್ಳುತ್ತಾರೆ. ಅದರಲ್ಲಿ ಸರಿ ತಪ್ಪು ಅಂತ ವ್ಯಾಖ್ಯಾನ ಮಾಡಲು ಹೋಗಲ್ಲ. ಅವರದ್ದು ಸಣ್ಣತನ ಅಂತ ಹೇಳೋಣವೇ?, ದೊಡ್ಡತನ ಅಂತ ಹೇಳೋಣವೇ? ಎಂದು ಪ್ರಶ್ನಿಸಿದರು.