ಸಚಿವ ರಾಜಣ್ಣ ವಿರುದ್ಧ ಮತ್ತೆ ಸಿಡಿದ ಬಿ.ಶಿವರಾಮು; ಜಿಲ್ಲೆಯಲ್ಲಿ 40% ದಾಟಿದ ಕಮಿಷನ್ ವ್ಯವಹಾರಕ್ಕೆ ಕಡಿವಾಣ ಹಾಕಿ ಎಂದು ಸಿಎಂಗೆ ಹೇಳಿದ್ದೇನೆ

ಹಾಸನ : ನಾವು ಅಧಿಕಾರಕ್ಕೆ ಬರುವಾಗ ಬಿಜೆಪಿ 40 ಪರ್ಸೆಂಟ್ ಲಂಚ ಅಂತಾ ಆರೋಪ ಮಾಡಿದ್ವಿ. ಆದರೆ ಈಗ ಅದಕ್ಕಿಂತ ಹೆಚ್ಚಾಗಿದೆ ಅದಕ್ಕೆ ಕಡಿವಾಣ ಹಾಕಿ ಎಂದು ನಾನೇ ಮುಖ್ಯಮಂತ್ರಿಗಳಿಗೆ ಹೇಳಿದ್ದೇನೆ ಎನ್ನುವ ಮೂಲಕ ಮಾಜಿ ಸಚಿವ ಬಿ.ಶಿವರಾಮು ತಮ್ಮದೇ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದರು.

ಹಾಸನ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ನಾನೇ ಸಿಎಂ ಸಿದ್ದರಾಮಯ್ಯ ಅವರಿಗೆ ಹೇಳಿದ್ದೇನೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಹಾಸನ‌ ಜಿ.ಪಂ.ಗೆ 13 ಕೋಟಿ ರೂ‌. ಅನುದಾನ ಬಂದಿದೆ. ಅದರ ಹಂಚಿಕೆಯಲ್ಲಿ ದೊಡ್ಡ ತಾರತಮ್ಯ ಆಗಿದೆ. ಈ ಅನುದಾನ ಉಸ್ತುವಾರಿ ಸಚಿವರ ವಿವೇಚನಾಧಿಕಾರದ ಕೋಟಾ ಅಂತೆ. ಕೇವಲ 50 ಸಾವಿರ ಇರುವ ಸಚಿವರ ಸಮುದಾಯಕ್ಕೆ ಎರಡೂವರೆ ಕೋಟಿ ಅನುದಾನವಂತೆ ಎಂದು ಕಿಡಿಕಾರಿದರು.

ಜಿಲ್ಲೆಯಲ್ಲಿ ನಾಲ್ಕು ಲಕ್ಷಕ್ಕೂ ಅಧಿಕ ಇರುವ ಪರಿಶಿಷ್ಟ ಸಮುದಾಯಕ್ಕೆ ಒಂದು ರೂಪಾಯಿ ಅನುದಾನ ಕೊಟ್ಟಿಲ್ಲ. ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರಿಗೆ ಮೂರು ಕೋಟಿ ರೂ. ಅನುದಾನ ಕೊಟ್ಟಿದ್ದಾರೆ ಎಂದು ಹರಿಹಾಯ್ದರು.

ಅನುದಾನ ಹಂಚಿಕೆ ತಾರತಮ್ಯದ ಬಗ್ಗೆ ಸಿಎಂ ಅವರ ಸಮ್ಮುಖದಲ್ಲಿ ಬೆಳಗಾವಿಯಲ್ಲಿ ಹೇಳಿದ್ದೆವು. ಆದರೆ ಸಿಎಂ ಮೌನವಾಗೇ ಇದ್ದರು, ನಮ್ಮ ಸಚಿವರ ಬೆನ್ನುತಟ್ಟಿ ಸರಿ ಮಾಡ್ಕೊಂಡ್ ಹೋಗು ಅಂದರು.

ಆಗ ನಾವು ಬಿಜೆಪಿ ಸರ್ಕಾರ 40% ಅಂತಾ ಆರೋಪ ಮಾಡಿ ಅಧಿಕಾರಕ್ಕೆ‌ ಬಂದಿದ್ದೀವಿ ಸಾರ್, ಈಗ ಅದಕ್ಕಿಂತ ಜಾಸ್ತಿ ಆಗಿದೆ ಇದಕ್ಕೆ ಕಡಿವಾಣ ಹಾಕಿ ಎಂದು ನೇರವಾಗೇ ಹೇಳಿದ್ದೇನೆ ಎಂದರು.