ಅಧಿಕಾರದ ದುರಂಹಂಕಾರ, ಹಣದ ಮದ, ಪಿತ್ತ ನೆತ್ತಿಗೆ ಏರಿ ಇವೆಲ್ಲಾ ಆಗಿದೆ: ರೇವಣ್ಣ ಕುಟುಂಬದ ವಿರುದ್ಧ ಎ.ಟಿ.ರಾಮಸ್ವಾಮಿ ಆಕ್ರೋಶ

ಅವರಿಗೆ ಹೊಗಳುಭಟರು ಬೇಕು| ಅದಕ್ಕೇ ಅನುಭವಿಸಬಾರದ್ದನ್ನು ಅನುಭವಿಸುತ್ತಿದ್ದಾರೆ

ಹಾಸನ: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಸನಕ್ಕೆ ಬಂದಾಗ ಅವರು ಪ್ರಜ್ವಲ್‌, ರೇವಣ್ಣ ಅವರ ಮಗ ಅಲ್ಲ, ನನ್ನ ಮಗ. ತಪ್ಪಿದ್ದರೆ ಕ್ಷಮಿಸಿ, ಆಶೀರ್ವಾದ ಮಾಡಿ ಅಂತ ಕೇಳಿದ್ದರು. ಈಗ ನಮ್ಮ ಕುಟುಂಬವೇ ಬೇರೆ, ಅವರ ಕುಟುಂಬವೇ ಬೇರೆ ಎನ್ನುತ್ತಿದ್ದಾರೆ. ಈ ರೀತಿ ಮಾತುಗಳು ಗಳಿಗೆಗೆ ತಕ್ಕಂತೆ, ಸಂದರ್ಭಕ್ಕೆ ತಕ್ಕಂತೆ ಬದಲಾಗಬಾರದು ಎಂದು ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ವಾಗ್ದಾಳಿ ನಡೆಸಿದರು.

ಹೊಳೆನರಸೀಪುರದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಆ ಪ್ರಕರಣದ ಬಗ್ಗೆ ನಾಲ್ಕು ತಿಂಗಳ ಹಿಂದೆ ಸಂಕ್ಷಿಪ್ತವಾಗಿ ಹೇಳಿದ್ದೆ. ಯಾರೋ ಒಬ್ಬರು ಅಶ್ಲೀಲ ಚಿತ್ರ ನನಗೆ ತೋರಿಸಲು ಬಂದಿದ್ದರು.ಈ ಕಣ್ಣಲ್ಲಿ ನೋಡಲ್ಲ, ಕಿವಿಯಲ್ಲಿ ಕೇಳಲ್ಲ ಅಂದಿದ್ದೆ.

ಅದನ್ನು ಪಬ್ಲಿಷ್ ಮಾಡುವುದರಿಂದ ನೂರಾರು ಕುಟುಂಬಗಳು ಬೀದಿಗೆ ಬರ್ತವೆ. ಸಾಮಾಜಿಕ ಸ್ವಾಸ್ಥ್ಯ ಕೆಡುತ್ತೆ ಅಂತ ಹೇಳಿದ್ದೆ. ಜವಾಬ್ದಾರಿ ಇರುವ ಹಿರಿಯರು ಅದನ್ನು ಗಮನಿಸಬೇಕಿತ್ತು. ಆದರೆ ಅವರು ಒಳ್ಳೆಯ ಮಾತುಗಳನ್ನು ಕೇಳುವುದಿಲ್ಲ ಕೊನೆ‌ ಕಾಲದಲ್ಲಿ ಕೇಡು ಬಂತು ಅಂತ ಗಾದೆ ಹೇಳ್ತಾರೆ. ಈ ವಿಚಾರದಲ್ಲಿ ಯಾರು ರಾಜಕೀಯ ಮಾಡಬಾರದು ಎಂದರು.

ಪ್ರಕರಣದ ಸತ್ಯಾಸತ್ಯತೆಯನ್ನು ಪರಿಶೀಲನೆ ಮಾಡಬೇಕು. ತಪ್ಪಿದ್ದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಇದರಲ್ಲಿ ರಾಜಕೀಯವನ್ನು ಬೆರೆಸಬಾರದು. ಈ ನೆಲದ ಕಾನೂನಿನಂತೆ ಎಲ್ಲರೂ ನಡೆದುಕೊಳ್ಳಬೇಕು. ಅದನ್ನು ಆಡಳಿತ ನಡೆಸುವವರು ಎತ್ತಿ ಹಿಡಿಯುತ್ತಾರೆ ಎಂದು ಭಾವಿಸಿದ್ದೇನೆ ಎಂದರು.

ನಾಯಕರು ಮಾತಿನಂತೆ ನಡೆದುಕೊಳ್ಳಬೇಕು. ಇದರಲ್ಲಿ ವೈಯಕ್ತಿಕ ಪ್ರತಿಷ್ಠೆ ಬೆಳೆಸಿಕೊಳ್ಳಬಾರದು. ತಪ್ಪು ಇಲ್ಲ ಎನ್ನುವುದಾರೆ ಯಾರು ಈ ರೀತಿ ಫೇಕ್ ಮಾಡಿ ವೈರಲ್ ಮಾಡಿದ್ದಾರೆ ಅವರ ಮೇಲೆ ಕ್ರಮ ತೆಗೆದುಕೊಳ್ಳಲಿ ಎಂದು ಆಗ್ರಹಿಸಿದರು.

ತುರ್ತಾಗಿ ಸಮಗ್ರ ತನಿಖೆ ನಡೆಯಬೇಕು. 2019 ರಲ್ಲಿ ನಡೆದ ಅಭ್ಯರ್ಥಿ ಆಯ್ಕೆ ಸಭೆಯಲ್ಲಿ ನಾನು ಪ್ರಜ್ವಲ್‌ರೇವಣ್ಣ ಹೆಸರು ಹೇಳಲಿಲ್ಲ. ಅದಕ್ಕೆ ನಮ್ಮ ಮೇಲೆ ಕೆಲವರು ಗುರ್ ಎಂದರು. ಸತ್ಯ ಕೆಲವರಿಗೆ ಹಿಡಿಸುವುದಿಲ್ಲ, ಅವರಿಗೆ ಹೊಗಳುಭಟರು ಬೇಕು. ಅದಕ್ಕೇ ಅನುಭವಿಸಬಾರದ್ದನ್ನು ಅನುಭವಿಸುತ್ತಿದ್ದಾರೆ ಎಂದು ಮಾರ್ಮಿಕವಾಗಿ ನುಡಿದರು.

ಇದನ್ನು ಎದುರಿಸುವ ಶಕ್ತಿಯನ್ನು ದೇವರು ಆ ಹಿರಿಯ ಮುತ್ಸದ್ದಿಗೆ ಕೊಡಲಿ. ಯಾರೇ ಆಗಿದ್ದರೂ ತಪ್ಪು ಮಾಡಿದವರ ಮೇಲೆ ಕ್ರಮ ಆಗಬೇಕು. ರಾವಣನಿಗೆ ಪರಮೇಶ್ವರನು ಕೊಟ್ಟ ಶಕ್ತಿ, ಸಕಲ ಐಶ್ವರ್ಯಗಳೂ ಇದ್ದವು. ಆದರೆ ಅಂತಿಮವಾಗಿ ಏನಾದ? ನಾಶವಾಗಲಿಲ್ಲವಾ?

ಸಿಕ್ಕಿದಂತಹ ಅಧಿಕಾರವನ್ನು ಸರಿಯಾಗಿ ಸದುಪಯೋಗ ಮಾಡಿಕೊಳ್ಳಬೇಕು. ಅಧಿಕಾರದ ದುರಂಹಂಕಾರ, ಹಣದ ಮದದ ಪಿತ್ತ ಏರಿ ಇವೆಲ್ಲಾ ಆಗಿದೆ ಎಂದರು.