ಹಾಸನಾಂಬ ಭಕ್ತರಿಗೆ ಕರೆಂಟ್‌ ಶಾಕ್‌; ಕಾರಣ ಏನು ಗೊತ್ತಾ?

ಗಾಯಾಳುಗಳ ಗಾಯಕ್ಕೆ ಕಾಲ್ತುಳಿತವೇ ಕಾರಣ

ಕರೆಂಟ್‌ ಶಾಕ್‌ ಭೀತಿಯಲ್ಲಿ ಭಕ್ಗರು ಚೆಲ್ಲಾಪಿಲ್ಲಿಯಾಗಿ ಓಡಿದ್ದರಿಂದ ಸ್ಥಳದಲ್ಲಿ ಬಿದ್ದಿದ್ದ ಚಪ್ಪಲಿಗಳ ರಾಶಿ

ಹಾಸನ: ಹಾಸನಾಂಬ ದೇವಾಲಯದ ಧರ್ಮದರ್ಶನದ ಸರದಿ ಸಾಲಿನಲ್ಲಿ ನಿಂತ ಭಕ್ತರಿಗೆ ವಿದ್ಯುತ್ ಶಾಕ್‌ ಉಂಟಾಗಲು ಕಾರಣವೇನು? ಎನ್ನುವ ಬಗ್ಗೆ ಸೆಸ್ಕ್‌ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಘಟನೆ ನಡೆದ ಸ್ಥಳದಲ್ಲಿನ ತನಿಖೆ ವೇಳೆ ಅತಿಯಾದ ಭಕ್ತರ ಒತ್ತಡದಿಂದ ಶಾಮೀಯಾನಾ ಕಿತ್ತು ಬಂದಿರುವುದು ಪತ್ತೆಯಾಗಿದೆ. ಶಾಮೀಯಾನಾ ಕಂಬಕ್ಕೆ ಅಳವಡಿಸಿದ್ದ ಫೋಕಸ್‌ ಲೈಟ್‌ ನ ವೈರ್‌ ಶಾಮೀಯಾನದೊಂದಿಗೆ ಸೇರಿ ತುಂಡಾಗಿದೆ. ಆಗ ಅದರಲ್ಲಿನ ವೈರ್‌ ಬ್ಯಾರಿಕೇಡ್‌ ಸಂಪರ್ಕಕ್ಕೆ ಬಂದು ಕೆಲ ಭಕ್ತರಿಗೆ ವಿದ್ಯುತ್‌ ಆಘಾತವಾಗಿದೆ ಎನ್ನುವ ಕಾರಣವನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
ಕಾಲ್ತುಳಿತದಿಂದ ಗಾಯ:
ಕರೆಂಟ್ ಶಾಕ್‌ ತಗುಲಿದ ಭಕ್ತರು ಹೆದರಿ ಚೀರಿದ್ದರಿಂದ ಗಾಬರಿಯಾದ ಸುತ್ತಮುತ್ತ ಸಾಲಿನಲ್ಲಿ ನಿಂತಿದ್ದವರು ಭೀತಿಯಿಂದ ಸಿಕ್ಕೆಡೆಗೆ ಓಡಿದ್ದರಿಂದ ಕಾಲ್ತುಳಿತ ಉಂಟಾಗಿದೆ. ಘಟನೆಯ ಗಾಯಾಳುಗಳ ಗಾಯಕ್ಕೆ ಕಾಲ್ತುಳಿತವೇ ಕಾರಣವಾಗಿದೆ. ಅಲ್ಲದೆ ವಿದ್ಯುತ್‌ ಶಾಕ್‌ ಆಗಿದೆ ಎನ್ನುವ ವಿಷಯ ತಿಳಿದ ತಕ್ಷಣ ಆ ಭಾಗದ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದ ಮುಂಜಾಗ್ರತೆ ಹೆಚ್ಚಿನ ಅನಾಹುತ ತಪ್ಪಿಸಿದೆ ಎನ್ನಲಾಗುತ್ತಿದೆ.