ಹಾಸನ, ಫೆಬ್ರವರಿ 10: ಕಾಫಿಗೆ ಇತ್ತೀಚೆಗೆ ಭಾರೀ ಬೆಲೆ ಬಂದ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಫಿ ಕಳ್ಳತನದ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂತಹದ್ದೇ ಒಂದು ಘಟನೆ ಸಕಲೇಶಪುರ ತಾಲ್ಲೂಕಿನ ಅರಕೆರೆ ಗ್ರಾಮದಲ್ಲಿ ನಡೆದಿದ್ದು, ತಮ್ಮನ ಮನೆಯ ಮುಂದೆ ಒಣಗಲು ಹಾಕಿದ್ದ ಕಾಫಿ ಕಳ್ಳತನಕ್ಕೆ ಅಣ್ಣನೇ ಯತ್ನಿಸಿರುವುದು ಈ ಪ್ರಕರಣದ ವಿಶೇಷವಾಗಿದೆ.
ಕಳೆದ ಮೂರು ವರ್ಷಗಳಿಂದ ತನ್ನ ತೋಟದ ಕಾಫಿ ಕಳವಾಗುತ್ತಿದ್ದದ್ದು ಹಾಗೂ ಈ ಬಾರಿ ಕಾಫಿಗೆ ಅಧಿಕ ಬೆಲೆ ಇರುವ ಕಾರಣದಿಂದ ದಿ.ಎ.ಸಿ.ಬಸವರಾಜು ಪುತ್ರ ಪವನ್ ಸಿಸಿಟಿವಿ ಅಳವಡಿಸಿದ್ದರು. ಆದರೆ, ತಾನು ಊಹಿಸದ ರೀತಿಯಲ್ಲಿ ಬಸವರಾಜು ಅವರ ಸ್ವಂತ ಅಣ್ಣನೇ ಕಾಫಿ ಕದಿಯಲು ಬಂದಿದ್ದರು!
ಪವನ್ ತಮ್ಮ ಮನೆಯ ಮುಂದೆ ಒಣಗಲು ಹಾಕಿದ್ದ ಕಾಫಿಯನ್ನು ರಾತ್ರಿ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಕೊಳ್ಳಲು ಬಂದಿದ್ದ ವ್ಯಕ್ತಿ ಮತ್ತಾರೂ ಅಲ್ಲ, ಅವರೇ ಪವನ ಅವರ ತಂದೆಯ ಅಣ್ಣ ಎ.ಸಿ. ಮಂಜುನಾಥ್!. ಅಕ್ಕಪಕ್ಕದಲ್ಲೇ ಇಬ್ಬರ ಮನೆಗಳಿದ್ದು, ಮಂಜುನಾಥ್ ತನ್ನ ಸಹೋದರನ ಮನೆಯ ಕಾಫಿ ಕದಿಯಲು ಯತ್ನಿಸಿದ್ದು ಸಿಸಿಟಿವಿಯಲ್ಲಿ ಕಂಡುಬಂದಿದೆ.
ಕಾಫಿ ಬೀಜ ಸಂಗ್ರಹಿಸುತ್ತಿದ್ದ ವೇಳೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದನ್ನು ಗಮನಿಸಿದ ಮಂಜುನಾಥ್ ತಕ್ಷಣವೇ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಪವನ್ ಈ ಬಗ್ಗೆ ಸಕಲೇಶಪುರ ಗ್ರಾಮಾಂತರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.