ವಿದ್ಯುತ್ ಪರಿವರ್ತಕಗಳನ್ನು ಆವರಿಸುತ್ತಿರುವ ಕಳೆಬಳ್ಳಿ; ಸೆಸ್ಕ್ ಅಧಿಕಾರಿಗಳಿಗೇಕೆ ಈ ಜಾಣಕುರುಡು?

ಚನ್ನರಾಯಪಟ್ಟಣ: ತಾಲೂಕಿನ ಹಿರೀಸಾವೆ ಹೋಬಳಿ ಪಿ.ಹೊಸಹಳ್ಳಿ ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ವಿದ್ಯುತ್ ಪರಿವರ್ತಕಗಳ ಮೇಲೆ ಹಾಗೂ ಕಂಬಗಳಿಗೆ ಕಳೆ ಬಳ್ಳಿ ಹಬ್ಬಿಕೊಂಡಿರುವುದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ.

ರಸ್ತೆ ಬದಿಯಲ್ಲಿ ಅಳವಡಿಸಿರುವ ವಿದ್ಯುತ್ ಪರಿವರ್ತಕ, ತಂತಿ ಹಾಗೂ ಕಂಬಗಳಿಗೆ ಅಂಬು ಹಬ್ಬಿದ್ದು ಸೆಸ್ಕ್ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದ ನಿರ್ಲಕ್ಷ್ಯ ಹಾಗೂ ನಿರ್ವಹಣೆಯ ಕೊರತೆಗೆ ಸಾಕ್ಷಿಯಾಗಿದೆ.

ಹಿರೀಸಾವೆ-ದಿಡಗ ಮುಖ್ಯ ರಸ್ತೆ ಮಾರ್ಗವಾಗಿ ಪ್ರತಿದಿನ ಸೆಸ್ಕ್ ಅಧಿಕಾರಿಗಳು ಸಂಚರಿಸಿದರೂ ಹಸಿರು ಬಳ್ಳಿಯ ಮೂಲಕ ವಿದ್ಯುತ್ ನೆಲಕ್ಕೆ ಹರಿದು ಜನರು ಅಪಾಯಕ್ಕೊಳಗಾಗುವ ಸಾಧ್ಯತೆ ಬಗ್ಗೆ ಜಾಣ ಕುರುಡು ಅನುಸರಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಕಳೆದ 20 ದಿನಗಳಿಂದ ಹಿರೀಸಾವೆ ವ್ಯಾಪ್ತಿಯಲ್ಲಿ ವ್ಯಾಪಕವಾಗಿ ಮಳೆ ಸುರಿಯುತ್ತಿದೆ. ರಸ್ತೆ ಬದಿಯಲ್ಲಿ ರೈತರು ಜಾನುವಾರುಗಳನ್ನು ಕಟ್ಟುವುದು ಸಾಮಾನ್ಯವಾಗಿದೆ. ಅಲ್ಲದೆ ವಾಹನಗಳು ಹಾಗೂ ಸಾರ್ವಜನಿಕರು ಸಂಚರಿಸುವ ರಸ್ತೆ ಬದಿಯಲ್ಲಿರುವ ವಿದ್ಯುತ್ ಪರಿವರ್ತಕ ಹಾಗೂ ಕಂಬಗಳಿಗೆ ಹಬ್ಬಿರುವ ಬಳ್ಳಿಗಳಿಂದ ವಿದ್ಯುತ್ ಹರಿದರೆ ಹೆಚ್ಚಿನ ಅನಾಹುತ ಸಂಭವಿಸಲಿದೆ ಎಂಬುದು ಸ್ಥಳೀಯರ ಆತಂಕವಾಗಿದೆ.