ಹಾಸನದಲ್ಲಿ ಪ್ರಜ್ವಲ್ ರಿಂದ ಸೋಲಾಯಿತು ಎನ್ನುವುದಿಲ್ಲ, ಹಿಂದೆ ದೇವೇಗೌಡರೂ ಸೋತಿದ್ದರು: ನಿಖಿಲ್ ಕುಮಾರಸ್ವಾಮಿ

ಇಂತಹ ಫಲಿತಾಂಶ ನಿರೀಕ್ಷೆ ಮಾಡಿರಲಿಲ್ಲ|ಪ್ರಜಾಪ್ರಭುತ್ವ ವ್ಯವಸ್ಥೆ, ಚುನಾವಣೆಯಲ್ಲಿ ಗೆಲುವು-ಸೋಲು ಸಾಮಾನ್ಯ.

 ಬೆಂಗಳೂರು: ಹಾಸನ ಲೋಕಸಭಾ ಕ್ಷೇತ್ರದಲ್ಲಿನ ಜೆಡಿಎಸ್ ಸೋಲಿಗೆ ಏ‌ನು ಕಾರಣ ಎನ್ನುವುದನ್ನು ಪಕ್ಷದ ಚೌಕಟ್ಟಿನಲ್ಲಿ ಮಾತನಾಡುತ್ತೇವೆ. ಆತ್ಮ ವಿಮರ್ಶೆ ಮಾಡಿಕೊಳುತ್ತೇವೆ. ಪ್ರಜ್ವಲ್‌ರಿಂದ ಸೋಲಾಯಿತು ಎನ್ನುವುದಿಲ್ಲ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.

ಪಕ್ಷದಿಂದ ಅಭ್ಯರ್ಥಿಗೆ ಟಿಕೆಟ್ ಕೊಟ್ಟಿದ್ದರು. ಚುನಾವಣೆಯಲ್ಲಿ ಸೋಲಾಗಿದೆ. ಅದರ ಬಗ್ಗೆ ನಾನೇನೂ ಮಾತಾಡಲ್ಲ. ಫಲಿತಾಂಶ ಅನಿರೀಕ್ಷಿತ ಬೆಳವಣಿಗೆ. ಹಾಸನದಲ್ಲಿ ಮತ್ತೆ ಪಕ್ಷ ಕಟ್ಟುವ ಕೆಲಸ ಮಾಡುತ್ತೇವೆ ಎಂದು ಸುದ್ದಿಗಾರರಿಗೆ ಹೇಳಿದರು.

ಇಂತಹ ಫಲಿತಾಂಶ ನಿರೀಕ್ಷೆ ಮಾಡಿರಲಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆ, ಚುನಾವಣೆಯಲ್ಲಿ ಗೆಲುವು-ಸೋಲು ಸಾಮಾನ್ಯ. ದೇವೇಗೌಡರೂ ಸೋತಿರೋ ಇತಿಹಾಸ ಇದೆ. ಸೋತಿದ್ದಾರೆ ಅಂತ ಬೇಸರ ಮಾಡಿಕೊಂಡು ಮನೆಯಲ್ಲಿ ಕೂರೋದಿಲ್ಲ. ಸಾವಿರಾರು ಕಾರ್ಯಕರ್ತರು ಹಾಸನದಲ್ಲಿ ಇದ್ದಾರೆ. ಅವರಿಗಾಗಿ ನಾವು ಅವರ ಜೊತೆ ಇದ್ದೇವೆ. ಮತ್ತೆ ಪಕ್ಷ ಕಟ್ಟುವ ಕೆಲಸ ಮಾಡುತ್ತೇವೆ ಎಂದರು.