ನಾವು ಕಂಟ್ರಾಕ್ಟ್ ಮ್ಯಾರೇಜ್ ಆಗುವುದಿಲ್ಲ, ಎರಡೂ ಕೈ ಸೇರಿದರೆ ಚಪ್ಪಾಳೆ; ಬಿಜೆಪಿ-ಜೆಡಿಎಸ್ ಮೈತ್ರಿ ಮುಂದುವರಿಕೆ ಬಗ್ಗೆ ಅಗರ್ವಾಲ್ ಸೂಚನೆ

ಹಾಸನ: ನಾವು ಕಂಟ್ರ್ಯಾಕ್ಟ್ ಮ್ಯಾರೇಜ್ ಆಗುವುದಿಲ್ಲ, ವಿವಾಹ ಎನ್ನುವುದು ನಮಗೆ ಧಾರ್ಮಿಕವಾದ ವಿಷಯ. ದೀರ್ಘಕಾಲ ಜೊತೆಯಾಗಿ ನಡೆಯಲು ಸಂಬಂಧ ಬೆಳೆಸುತ್ತೇವೆ ಎಂದು ಬಿಜೆಪಿ ರಾಜ್ಯ ಚುನಾವಣಾ ಪ್ರಭಾರಿ ರಾಧಮೋಹನ್ ಅಗರ್ವಾಲ್ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ-ಜೆಡಿಎಸ್ ಮೈತ್ರಿ ಲೋಕಸಭೆ ಚುನಾವಣೆಗೆ ಸೀಮಿತವೇ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಎರಡೂ ಕೈಸೇರಿದರೆ ಚಪ್ಪಾಳೆ ಆಗುತ್ತದೆ. ನಾವು ಸಹ ಈ ಸಂಬಂಧ ದೀರ್ಘಕಾಲ ಮುಂದುವರಿಯುವುದನ್ನು ಬಯಸುತ್ತೇವೆ ಎನ್ನುವ ಮೂಲಕ ಜೆಡಿಎಸ್ ನಡೆಯೂ ಮೈತ್ರಿ ಮುಂದುವರಿಕೆಯಲ್ಲಿ ಪ್ರಮುಖ ಎನ್ನುವುದನ್ನು ಸೂಚ್ಯವಾಗಿ ಹೇಳಿದರು.

ನಮ್ಮ ಪಕ್ಷದ ಹಾಸನ ಜಿಲ್ಲಾ ಘಟಕದ ಕಾರ್ಯಕರ್ತರು ತುಂಬಾ ವಿಶ್ವಾಸದಲ್ಲಿದ್ದಾರೆ. ಈ ಬಾರಿ ಮೋದಿ ಸರ್ಕಾರ ತರಬೇಕು ಎಂದು ಅವರು ಕೆಲಸ ಮಾಡುತ್ತಿದ್ದಾರೆ. ನನ್ನಷ್ಟೇ ಉತ್ಸಾಹದಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ ಎಂದರು.

ಮಾಧುಸ್ವಾಮಿ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸೋಮಣ್ಣ ಪರ ಪ್ರಚಾರ ಮಾಡುವಂತೆ ತಮ್ಮ ಕಾರ್ಯಕರ್ತರಿಗೆ ಸಭೆ ನಡೆಸಿ ಸೂಚನೆ ನೀಡಿದ್ದಾರೆ.

ಈಶ್ವರಪ್ಪ ವಿಚಾರದಲ್ಲಿ ಸಣ್ಣ ಸಮಸ್ಯೆ ಇರುವುದನ್ನು ಒಪ್ಪಿಕೊಳ್ಳುತ್ತೇನೆ. ಅವರು ಕೂಡ ನರೇಂದ್ರಮೋದಿ ಪರ ಪ್ರಚಾರ ನಡೆಸುತ್ತಿದ್ದಾರೆ. ಅವರು ನಾಮಪತ್ರ ಸಲ್ಲಿಸಿದರೆ, ವಾಪಾಸ್ ಪಡೆಯದಿದ್ದರೆ ಆಗ ಅವರ ಬಗ್ಗೆ ಪ್ರಶ್ನಿಸಿ‌ ಎಂದರು.

ಅವರು ಮೋದಿ ಮತ್ತು ಬಿಜೆಪಿ ಪರ ಕೆಲಸ ಮಾಡುತ್ತಿದ್ದಾರೆ. ಅವರು ಗೆದ್ದ ನಂತರ ಬಿಜೆಪಿ ಜೊತೆ ವಿಲೀನ ಆಗುತ್ತೇನೆ ಎಂದೇ ಹೇಳುತ್ತಿದ್ದಾರೆ ಎಂದರು.

ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಚುನಾವಣೆ ಐತಿಹಾಸಿಕವಾಗಲಿದೆ. ನಮ್ಮ ಎದುರಾಳಿ ಬಳಿ ಅಪಾರವಾದ ಸಂಪತ್ತು ಇದೆ. ಐನೂರು ಕೋಟಿಗೂ ಹೆಚ್ಚು ಆಸ್ತಿ ಹೊಂದಿರುವ ಅವರು ಯಾವ ವ್ಯಾಪಾರ ಮಾಡುತ್ತಿದ್ದಾರೆ ತಿಳಿಯದು.

ಅವರ ಎದುರಿಗೆ ತಮ್ಮ ಜೀವನ ಪೂರ್ತಿ ನಿಸ್ವಾರ್ಥ ಸೇವೆ ಮಾಡಿರುವ ಡಾ.ಸಿ.ಎನ್. ಮಂಜುನಾಥ್ ಅವರು ತಮ್ಮ ಪ್ರಾಮಾಣಿಕತೆಗೆ ಹೆಸರಾಗಿದ್ದಾರೆ. ಅವರ ಬಳಿ ಚುನಾವಣೆ ನಡೆಸಲು ಹಣವಿಲ್ಲ. ಅಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೀನಾಯವಾಗಿ ಸೋಲಲಿದ್ದಾರೆ ಎಂದರು.