ಹಾಸನ; (kannadapost.in) ಲಕ್ಷಾಂತರ ಭಕ್ತರನ್ನು ಹೊಂದಿರುವ, ನಿತ್ಯವೂ ಸಾವಿರಾರು ಜನರು ಭೇಟಿ ನೀಡುವ ಶಕ್ತಿದೇವತೆ ಪುರದಮ್ಮ ದೇವಿ ದೇವಾಲಯಕ್ಕೆ ಹದಿನೈದು ದಿನಗಳಿಂದ ನೀರು ಪೂರೈಕೆ ಸ್ಥಗಿತಗೊಂಡಿದ್ದು ಸಾರ್ವಜನಿಕರು ಪರದಾಡುತ್ತಿದ್ದಾರೆ.
ನಿತ್ಯವೂ ಆಗಮಿಸುವ ಭಕ್ತರು ಕೈ,ಕಾಲು ತೊಳೆದುಕೊಳ್ಳಲು, ಮಾಂಸಾಹಾರ ತಯಾರಿಸಲು, ಆಹಾರ ಸೇವಿಸಲು ಹಾಗೂ ಸ್ವಚ್ಛತಾ ಕಾರ್ಯಕ್ಕೆ ಸಾವಿರಾರು ಲೀಟರ್ ನೀರು ಅಗತ್ಯವಿದೆ. ಇದಕ್ಕಾಗಿ ಮುಜರಾಯಿ ಇಲಾಖೆ ಒಂದು ಬೋರ್ ವೆಲ್ ಸೌಲಭ್ಯವನ್ನೂ ಕಲ್ಪಿಸಿದೆ.
ಆದರೆ ಹದಿನೈದು ದಿನಗಳಿಂದ ಈ ಬೋರ್ ವೆಲ್ ಗೆ ವಿದ್ಯುತ್ ಸಂಪರ್ಕ ಇಲ್ಲವಾಗಿದೆ. ಟ್ರಾನ್ಸ್‌ಫಾರ್ಮಾರ್ ಸುಟ್ಟಿರುವುದರಿಂದ ಸಮಸ್ಯೆಯಾಗಿದೆ ಎಂದು ಸಿಬ್ಬಂದಿ ಹೇಳುತ್ತಿದ್ದಾರೆ. ಆದರೆ ಅದರ ಅರಿವಿಲ್ಲದೇ ಆಗಮಿಸುವ ಭಕ್ತರು ನೀರಿಲ್ಲದೇ ಪರದಾಡುತ್ತಿದ್ದಾರೆ.
ಇದರಿಂದಾಗಿ ಟ್ಯಾಂಕರ್ ನೀರು ಸರಬರಾಜುದಾರರಿಗೆ, ಕುಡಿಯುವ ನೀರಿನ ಕ್ಯಾನ್ ಮಾರಾಟಗಾರರಿಗೆ ಇನ್ನಿಲ್ಲದ ಬೇಡಿಕೆ ಬಂದಿದ್ದು, ಹಣ ನೀಡಿ ನೀರು ಖರೀದಿಸುವ ಅನಿವಾರ್ಯತೆ ಬಂದೊದಗಿದೆ.
ನೀರಿನ ಕೊರತೆಯಿಂದಾಗಿ ಸ್ವಚ್ಛತೆ ಸಮಸ್ಯೆಯೂ ತಲೆದೋರಿದೆ. ತಾಲೂಕು ಆಡಳಿತ ಸಂಪೂರ್ಣವಾಗಿ ಹಾಸನಾಂಬ ಜಾತ್ರೋತ್ಸವದಲ್ಲಿ ತೊಡಗಿಕೊಂಡಿದೆ. ಇಲ್ಲಿನ ಭಕ್ತರ ಕಷ್ಟ ಕೇಳುವವರೇ ಇಲ್ಲವಾಗಿದ್ದಾರೆ ಎಂದು ಭಕ್ತ ರಮೇಶ್ ಅಸಮಾಧಾನ ವ್ಯಕ್ತಪಡಿಸಿದರು.