ಹಾಸನ: ಬೇಲೂರು ತಾಲೂಕು ಬಿಕ್ಕೋಡು ವ್ಯಾಪ್ತಿಯಲ್ಲಿ ಮೂರು ಹೆಣ್ಣಾನೆಗಳಿಗೆ ರೇಡಿಯೋ ಕಾಲರ್ ಅಳವಡಿಕೆ ಹಾಗೂ ಮೂರು ಪುಂಡಾನೆಗಳನ್ನು ಸ್ಥಳಾಂತರ ಮಾಡಿದ ನಂತರ ಸಕಲೇಶಪುರ ಭಾಗಕ್ಕೆ ತೆರಳಿದ ವೇಳೆ ವೀರ ಅರ್ಜುನ ಇಲ್ಲವಾಗಿದ್ದಾನೆ.
ಸೆರೆ ಕಾರ್ಯಾಚರಣೆ ವೇಳೆ ಕಾಡಾನೆ ಜೊತೆ ಕಾದಾಡಿ ಅರ್ಜುನ ವೀರ ಮರಣ ಹೊಂದಿದ್ದಾನೆ. ಆದರೆ ಅಲ್ಲಿಗೆ ಹೋದ ಕೂಡಲೇ ಕಾಡಾನೆ ಎದುರಾಯಿತು. ಕೂಡಲೇ ಅರ್ಜುನ, ಅದನ್ನು ಹೆದರಿಸಿ ವಾಪಸ್ ಕಳಿಸಿದ, ಅದು 300 ಮೀಟರ್ ಓಡಿ ಹೋಯಿತು ಎಂದು ಮಾವುತ ವಿನು ತಿಳಿಸಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಾಡಾನೆ ಕಂಡ ಮೇಲೂ ಡಾಟ್ ಮಾಡಲಿಲ್ಲ. ಮಾಡಿದ್ದರೆ ಅರ್ಜುನ ಬಚಾವಾಗುತ್ತಿದ್ದನೇನೊ, ಆದರೆ ಆಕಸ್ಮಿಕವಾಗಿ ಅರ್ಜುನನಿಗೆ ಗುಂಡೇಟಾಯ್ತು, ಕೂಳೆ ಚುಚ್ಚಿತು, ಅರ್ಜುನನಿಗೆ ಬಲ ಸಿಗಲಿಲ್ಲ ಎಂದರು.
ನನ್ನ ಆನೆಯನ್ನು ತಂದು ಕೊಡಿ ಎಂದು ಕಣ್ಣೀರಿಟ್ಟ ವಿನು, ಕಾಡಾನೆಗೆ ಫೈರ್ ಮಾಡಲು ಹೋಗಿ ನನ್ನ ಆನೆಗೆ ಹೊಡೆದರು ಎಂದು ಬಿಕ್ಕಿಬಿಕ್ಕಿ ಅಳುತ್ತಲೇ ನಡೆದ ಘಟನೆ ವಿವರಿಸಿದರು.
ಪ್ರಶಾಂತ್‌ನಿಗೆ ಮಿಸ್ ಫೈಯರ್ ಆಗಿ ಅರವಳಿಕೆ ಚುಚ್ಚುಮದ್ದು ನೀಡಲಾಗಿತ್ತು. ಕಾಡಾನೆ ಓಡಿ ಹೋಗಿದ್ದರಿಂದ ನಾನು ಇಳಿದು ಪ್ರಶಾಂತನಿಗೆ ನೀರು ಹಾಕಲು ಹೋದೆ. ನಾನು ಬರುವಷ್ಟರಲ್ಲಿ ಹೀಗೆಲ್ಲಾ ಆಗೋಯ್ತು. ನಾನಿದಿದ್ದರೆ ಅದನ್ನು ಬಿಡುತ್ತಿರಲಿಲ್ಲ. ಎಷ್ಟೋ ಕಡೆ ಕಾರ್ಯಾಚರಣೆಗೆ ಹೋಗಿದ್ದೀನಿ, ಎಷ್ಟೋ ಹುಲಿ, ಕಾಡಾನೆಗಳನ್ನು ಕ್ಯಾಪ್ಚರ್ ಮಾಡಿದ್ದೀನಿ, ಆದರೆ ನಿನ್ನೆ ನನ್ನ ಕ್ಯಾಪ್ಟನ್ ಮಣ್ಣಲ್ಲಿ ಮಣ್ಣಾದ ಎಂದು ಕಂಬನಿ ಮಿಡಿದರು.
ಅವನು ಹೋಗುವ ಮುಂಚೆ ದೇವರು ನನ್ನನ್ನು ಕರೆದುಕೊಳ್ಳಬೇಕಿತ್ತು.
ನಮ್ಮ ಮೈಸೂರಿನವರಿಗೆ ಅರ್ಜುನ ಎಂದರೆ ತುಂಬಾ ಇಷ್ಟ. ನಮ್ಮ ಅಪ್ಪ, ಅಮ್ಮನಿಗೆ ಹೇಗೆ ಮುಖ ತೋರಿಸಲಿ. ಅವತ್ತಿನಿಂದ ಏನು ತಿಂದಿಲ್ಲವAತೆ ಎಲ್ಲಾ ಹಾಗೇ ಇದ್ದಾರೆ, ಫೋನ್ ಮಾಡಿದ್ರು. ನನ್ನ ಮಕ್ಕಳು ಏನೂ ತಿಂದಿಲ್ಲ, ಸ್ಕೂಲಿಗೂ ಹೋಗಿಲ್ಲ, ಅರ್ಜುನ ಗಂಟೆ ಅಲ್ಲಾಡಿಸುತ್ತಿದ್ದಂತೆ ಬೆಲ್ಲ ತಂದು ನಿಂತು ಕೊಳ್ಳೋರು. ದಯವಿಟ್ಟು ನನ್ನ ಆನೆಯನ್ನು ಕೊಡಿ ಸರ್, ನಾನು ೨೦೧೫-೨೦೧೬ ರಲ್ಲಿ ಅರ್ಜುನನ ಜೊತೆಯಾದೆ. ಮೂರು ಬಾರಿ ಅಂಬಾರಿ ಹೊತ್ತೆವು. ಚಿನ್ನದಂತ ಆನೆ ಎಂದು ಗಳಗಳನೆ ಅತ್ತರು.
ನಾವು ಶೆಡ್ ಹಾಕಿಕೊಂಡು ಮಲಗಿದ್ದಾಗ ನಮ್ಮ ಹತ್ತಿರ ಕಾಡಾನೆ ಬರಲು ಬಿಡುತ್ತಿರಲಿಲ್ಲ. ನಮಗಿಂತ ಮುಂಚೆ ಅರ್ಜುನನೇ ಎದ್ದೇಳುತ್ತಿದ್ದ. ಮುಂದೆ ಉಳಿದ ಆನೆಗಳಿಗೂ ಸುರಕ್ಷತೆ ನೀಡಿ, ಅಭಿಮನ್ಯುವನ್ನು ಎಲ್ಲಿಗೂ ಕಳಿಸಬೇಡಿ ಎಂದು ಮನವಿ ಮಾಡಿದರು.
ದುಃಖ ತಡೆಯದ ವಿನು:
ಹೊರಡುವ ಮುನ್ನ ಸಿಸಿಎಫ್, ಡಿಎಫ್‌ಒ ಎಷ್ಟೇ ಸಮಾಧಾನ ಮಾಡಿದರೂ, ವಿನು ಬಿಕ್ಕಿ ಬಿಕ್ಕಿ ಅಳುವುದನ್ನು ಮುಂದುವರಿಸಿದ. ಧೈರ್ಯವಾಗಿರು, ಎಂದು ಸಮಾಧಾನ ಮಾಡಿದರೂ ಕೇಳಲಿಲ್ಲ. ಅರ್ಜುನನನ್ನು ಹೇಗೆ ಮರೆಯಲಿ ಎಂದು ಕಣ್ಣೀರು ಹಾಕಿದ.
ಪುಂಡಾನೆ ಹಿಡಿದೇ ತೀರುತ್ತೇವೆ;
ಅರ್ಜುನನನ್ನು ಕೊಂದ ಕಾಡಾನೆಯನ್ನ ಸೆರೆ ಹಿಡಿದೇ ತೀರುತ್ತೇವೆ ಎಂದು
ಮಾವುತ ಗುಂಡಣ್ಣ ಶಪಥ ಮಾಡಿದರು. ಅದನ್ನು ಹಿಡಿದು ಜನರ ಮುಂದೆ ತಂದೇ ತರ್ತೇವೆ ಎಂದು ಅಧಿಕಾರಿಗಳು ಮಾವುತರಿಗೆ ಸಾಂತ್ವನ ಹೇಳುತ್ತಿದ್ದಾಗ ಈ ಮಾತು ಹೇಳಿದರು.
ಅರ್ಜುನನ್ನ ಕಳೆದುಕೊಂಡು ಚಿಂತೆಯಾಗಿದೆ. ನಮಗೂ ನೋವಾಗಿದೆ, ಆದ್ರೆ ಮನಸ್ಸು ಗಟ್ಟಿಮಾಡಿಕೊಂಡಿದ್ದೇವೆ. ಯಾರೂ ಏನೂ ಮಾಡೋದಕ್ಕೆ ಆಗಲ್ಲ, ಮತ್ತೆ ಬರುತ್ತೇವೆ. ನಾವು ಅರ್ಜುನನನ್ನು ಬಲಿ ಪಡೆದ ಆನೆ ಹಿಡಿಯಲೇ ಬೇಕಿದೆ. ಮತ್ತೆ ಇದೇ ಕ್ಯಾಂಪ್‌ಗೆ ಬರ್ತೇವೆ ಎಂದರು. ಅದಕ್ಕೆ ಮಾವುತ ಹೌದು; ಹಿಡಿಯಲೇ ಬೇಕು
-ಮಾವುತ ಗುಂಡಣ್ಣ