ಹಾಸನ: ಕಾಡಾನೆ ದಾಳಿಗೆ ಯುವಕ ಬಲಿ ಪ್ರಕರಣ– ಅರೇಹಳ್ಳಿ ಹೋಬಳಿ ಬಂದ್ ಗೆ ಬೆಂಬಲ

ಬೇಲೂರು, ಫೆಬ್ರವರಿ 25: ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಬ್ಯಾದನೆ ಗ್ರಾಮದಲ್ಲಿ ಮತ್ತೆ ಕಾಡಾನೆ ದಾಳಿ ನಡೆಸಿ, 28 ವರ್ಷದ ಯುವಕ ಅನಿಲ್ ಕುಮಾರ್ ಬಲಿಯಾಗಿರುವ ಘಟನೆ ಆತಂಕ ಸೃಷ್ಟಿಸಿದೆ. ಕಳೆದ ಹತ್ತು ದಿನಗಳಲ್ಲಿಯೇ ಇಂತಹ ಎರಡನೇ ದುರ್ಘಟನೆ ಇದಾಗಿದೆ. ಇದು ಸ್ಥಳೀಯರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, “ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕೊಡಬೇಕು” ಎಂದು ಒತ್ತಾಯಿಸಿದ್ದಾರೆ.

ಅರಣ್ಯ ಸಚಿವರ ಭೇಟಿ ಆಗ್ರಹ – ಶವವಿಟ್ಟು ಪ್ರತಿಭಟನೆ

ಯುವಕನ ದುರ್ಮರಣದಿಂದ ಕೋಪಗೊಂಡ ಗ್ರಾಮಸ್ಥರು, ಅರಣ್ಯ ಸಚಿವರು ಸ್ಥಳಕ್ಕೆ ಬರುವವರೆಗೆ ಶವವಿಟ್ಟು ಪ್ರತಿಭಟನೆ ನಡೆಸುವ ನಿರ್ಧಾರಕ್ಕೆ ಬಂದಿದ್ದರು. ಹಲವಾರು ಗ್ರಾಮಸ್ಥರು, ರೈತ ಸಂಘಟನೆಗಳು, ಹಾಗೂ ಸ್ಥಳೀಯ ಮುಖಂಡರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದರು.

ಪ್ರತಿಭಟನಾಕಾರರ ಮನವೊಲಿಸಿದ ಅಧಿಕಾರಿಗಳು
ಪ್ರತಿಭಟನೆ ಗಾಂಭೀರ್ಯ ಧರಿಸಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಕಾಡಾನೆ ಹಾವಳಿಗೆ ತಕ್ಷಣ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಅವರ ಮನವೊಲಿಕೆಯ ನಂತರ, ತಡರಾತ್ರಿ 2 ಗಂಟೆ ಸುಮಾರಿಗೆ ಅನಿಲ್ ಕುಮಾರ್ ಅವರ ಶವವನ್ನು ಬೇಲೂರು ತಾಲ್ಲೂಕು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.

ಅರೆಹಳ್ಳಿ ಹೋಬಳಿಯಲ್ಲಿ ಬಂದ್ – ಬೆಳೆಗಾರರ ಒಕ್ಕೂಟದ ಕರೆ

ಕಾಡಾನೆ ಹಾವಳಿ ತಡೆಯಲು ತಕ್ಷಣ ತಗೊಳ್ಳಬೇಕಾದ ಕ್ರಮಗಳ ಬಗ್ಗೆ ಸರ್ಕಾರ ಮತ್ತು ಅರಣ್ಯ ಇಲಾಖೆಯ ನಿರ್ಲಕ್ಷ್ಯವನ್ನು ಗಂಭೀರವಾಗಿ ಪ್ರಶ್ನಿಸಿರುವ ಗ್ರಾಮಸ್ಥರು, ಇಂದು ಅರೆಹಳ್ಳಿ ಹೋಬಳಿಯಲ್ಲಿ ಬಂದ್ ನಡೆಸುತ್ತಿದ್ದಾರೆ. ಬೆಳೆಗಾರರ ಒಕ್ಕೂಟ, ರೈತ ಸಂಘಟನೆಗಳು, ಹಾಗೂ ಹಲವಾರು ಹೋರಾಟಗಾರರು ಈ ಬಂದ್‌ಗೆ ಬೆಂಬಲ ಸೂಚಿಸಿದ್ದಾರೆ.

ಮಿತಿ ಮೀರುತ್ತಿರುವ ಕಾಡಾನೆ ಹಾವಳಿ – ಜನರ ಜೀವ ಭಯದಲ್ಲಿ

ಅರೆಹಳ್ಳಿ ಭಾಗದಲ್ಲಿ ಕಾಡಾನೆ ದಾಳಿಗಳು ಮಿತಿಮೀರಿದ್ದು, ಸ್ಥಳೀಯರು ಪ್ರತಿದಿನವೂ ಆತಂಕದ ಜೀವನ ನಡೆಸುವ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಕಳೆದ ಹತ್ತು ದಿನಗಳಲ್ಲಿಯೇ ಇಬ್ಬರು ಈ ದಾಳಿಗೆ ಬಲಿಯಾಗಿರುವುದು, ಸಮಸ್ಯೆಯ ತೀವ್ರತೆಯನ್ನು ಎತ್ತಿ ತೋರಿಸುತ್ತಿದೆ. ಆದರೆ, ಅರಣ್ಯ ಇಲಾಖೆ ಈ ಸಮಸ್ಯೆ ಕುರಿತು ನಿರ್ಲಕ್ಷ್ಯ ವಹಿಸುತ್ತಿರುವ ಆರೋಪಗಳು ಕೇಳಿಬಂದಿವೆ.

“ಕೇವಲ ಭರವಸೆ ಕೊಡುವುದು ಸಾಕಾಗದು. ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರವಾಗಿ ತಕ್ಷಣ ತಗೊಳ್ಳುವ ಕ್ರಮಗಳನ್ನು ಜಾರಿಗೆ ತರಬೇಕು” ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.