ಕಡೆಗೂ ಆಪರೇಷನ್ ವಿಕ್ರಾಂತ್ ಸಕ್ಸಸ್!; ಎರಡನೇ ಪುಂಡಾನೆ ಸೆರೆ

ಹಾಸನ: ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಯ ಮೂರು ದಿನಗಳ ಶ್ರಮಕ್ಕೆ ಅಂತಿಮ ಫಲ ಲಭಿಸಿದ್ದು, ಬೇಲೂರು ತಾಲ್ಲೂಕಿನ ವಾಟೀಹಳ್ಳಿ ಗ್ರಾಮದಲ್ಲಿ ಕಳೆದ ಮೂರು ದಿನಗಳಿಂದ  ತಲೆನೋವಾಗಿ ಮಾರ್ಪಟ್ಟಿದ್ದ ವಿಕ್ರಾಂತ್ ಆನೆ ಸೆರೆ‌ ಸಿಕ್ಕಿದೆ.

ಹರಸಾಹಸಪಟ್ಟು ಅರವಳಿಕೆ ಚುಚ್ಚುಮದ್ದು ನೀಡಿದ ವೈದ್ಯರು

ಕಾಫಿ ತೋಟದೊಳಗೆ ಎರಡು ಕಾಡಾನೆಗಳ ಜೊತೆ ತೆರಳಿದ್ದ ವಿಕ್ರಾಂತ್ ಅನ್ನು ಕಾಡಾನೆಗಳಿಂದ ಪ್ರತ್ಯೇಕಿಸುವ ಯೋಜನೆ ಯಶಸ್ವಿಯಾಗಿ ನೆರವೇರಿಸಿದ ಅರಣ್ಯ ಇಲಾಖೆ ತಂಡ, ನಂತರ ಅರವಳಿಕೆ ಚುಚ್ಚುಮದ್ದು ನೀಡಲು ಸಾಧ್ಯವಾಯಿತು. ಚುಚ್ಚುಮದ್ದು ನೀಡಿದ ಬಳಿಕ ಸ್ವಲ್ಪ ದೂರ ಓಡಿ ಕುಸಿದು ಬಿದ್ದ ವಿಕ್ರಾಂತ್ ಅನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತರಲಾಯಿತು.

ಮೂರು ದಿನಗಳ ಬೃಹತ್ ಕಾರ್ಯಾಚರಣೆ:

ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಮುಗಿಸಲು ಶತಾಯಗತಾಯ ಪ್ರಯತ್ನಿಸಿದ ಅರಣ್ಯ ಇಲಾಖೆ ಮತ್ತು ಎಲಿಫೆಂಟ್ ಟಾಸ್ಕ್ ಫೋರ್ಸ್ (ETF) ಸಿಬ್ಬಂದಿ, ಇಂದು ಬೆಳಿಗ್ಗೆ ಏಳು ಸಾಕಾನೆಗಳ ಸಹಾಯದಿಂದ ಕಾರ್ಯಾಚರಣೆಯನ್ನು ಮುನ್ನಡೆಸಿದರು. ದಟ್ಟ ಕಾಡು, ತೋಟದ ನೆರಳಿದ ಪ್ರದೇಶದ ಪ್ರತಿಕೂಲ ಪರಿಸ್ಥಿತಿಯ ನಡುವೆಯೂ ಮಧ್ಯಾಹ್ನದ ವೇಳೆಗೆ ವಿಕ್ರಾಂತ್ ಬೆನ್ನುಬಿದ್ದಿದ್ದರು.

ಇನ್ನೂರಕ್ಕೂ ಹೆಚ್ಚು ಸಿಬ್ಬಂದಿಯ ಶ್ರಮ

ಮೂರು ದಿನಗಳ ಕಾಲ ನಡೆದ ಈ ಬೃಹತ್ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆ, ಪೊಲೀಸ್ ಸಿಬ್ಬಂದಿ ಸೇರಿ 200ಕ್ಕೂ ಹೆಚ್ಚು ಜನರ ತಂಡ ಭಾಗಿಯಾಗಿತ್ತು.  ಹಾಸನ ಡಿಎಫ್‌ಓ ಸೌರಭ್‌ಕುಮಾರ್ ಹಾಗೂ ಇತರ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು.

ವಿಕ್ರಾಂತ್‌ನ್ನು ಸಂಪೂರ್ಣವಾಗಿ ನಿಯಂತ್ರಿಸಿದ ನಂತರ, ಆತನನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸುವ ಕಾರ್ಯ ಪ್ರಗತಿಯಲ್ಲಿದ್ದು, ಗ್ರಾಮಸ್ಥರು ಈಗ ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ.