ಹಾಸನ: ಬೇಲೂರು ತಾಲ್ಲೂಕಿನ ಇರಕರವಳ್ಳಿ ಗ್ರಾಮದಲ್ಲಿ ಮನೆ ಆವರಣಕ್ಕೆ ದೈತ್ಯಾಕಾರದ ಕಾಡಾನೆ ಭೀಮ ಆಹಾರ ಅರಸಿ ಪ್ರವೇಶಿಸಿದ್ದು, ಕಣದಲ್ಲಿದ್ದ ಕಾಫಿ ಬೀಜಗಳನ್ನು ತಿಂದು ನಷ್ಟ ಮಾಡಿದೆ.
ಗ್ರಾಮದ ಶಿವಕುಮಾರ್ ತಮ್ಮ ಮನೆಯ ಮುಂದೆ ಕಾಫಿ ಬೀಜಗಳನ್ನು ರಾಶಿ ಹಾಕಿ ಪ್ಲಾಸ್ಟಿಕ್ ಟಾರ್ಪಾಲ್ ಮುಚ್ಚಿ ಇಟ್ಟಿದ್ದರು. ಆದರೆ, ಮಧ್ಯರಾತ್ರಿಯಲ್ಲಿ ಆಹಾರ ಹುಡುಕುತ್ತಾ ಮನೆಯ ಆವರಣಕ್ಕೆ ಬಂದ ಭೀಮ, ಟಾರ್ಪಲ್ ಎಳೆದು ಕಾಫಿ ಬೀಜಗಳನ್ನು ತಿಂದು ಚೆಲ್ಲಾಪಿಲ್ಲಿ ಮಾಡಿದೆ.
ಈ ಘಟನೆ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಭೀಮನ ಭಾರೀ ಚಲನವಲನವನ್ನು ನೋಡಿ ಶಿವಕುಮಾರ್ ಕುಟುಂಬ ಆತಂಕಗೊಂಡಿದೆ. ಘಟನೆಯ ನಂತರ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದು ಕಾಡಾನೆಗಳನ್ನು ನಿಯಂತ್ರಣಕ್ಕೆ ತರಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
“ಕಾಫಿ ಫಸಲಿಗೆ ಹಾನಿ ಉಂಟಾಗಿದೆ, ಅದರ ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕು,” ಎಂದು ಶಿವಕುಮಾರ್ ಆಗ್ರಹಿಸಿದ್ದಾರೆ.
ಈ ಮಧ್ಯೆ, ಭೀಮ ಕಾಫಿ ತೋಟದ ಸುತ್ತಮುತ್ತಲೇ ಬೀಡು ಬಿಟ್ಟಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಕಾಡಾನೆ ಚಲನೆಯಿಂದ ಗ್ರಾಮಸ್ಥರು ಭೀತಿಗೊಳಗಾಗಿದ್ದು, ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಬೇಡಿಕೆ ಇಟ್ಟಿದ್ದಾರೆ.