ನಾನು ಕರ್ನಾಟಕಕ್ಕೆ ಬರ್ತಿನಿ ಎಂದರೆ ಅವರಿಗೆ ಕೈಕಾಲು ನಡುಗುತ್ತದೆ: ಎಚ್.ಡಿ.ಕುಮಾರಸ್ವಾಮಿ

ಈ ರಾಜ್ಯದಲ್ಲಿ ದರೋಡೆ ನಡೆಯುತ್ತಿದೆ. ಟೆರರಿಸ್ಟ್ ಆ್ಯಕ್ಟಿವಿಟಿಗಿಂತಲೂ ದರೋಡೆ ಚೆನ್ನಾಗಿ ನಡೆಯುತ್ತಿದೆ‌.

ಹಾಸನ:ಸ್ಥಳ ಪರಿಶೀಲನೆ ಮಾಡುವುದು ಜನಪ್ರತಿನಿಧಿಯಾಗಿ ನನ್ನ ಧರ್ಮ, ನಾನು ಕರ್ನಾಟಕಕ್ಕೆ ಬರ್ತಿನಿ ಎಂದರೆ ಅವರಿಗೆ ಕೈಕಾಲು ನಡುಗುತ್ತದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಸಕಲೇಶಪುರ ತಾಲ್ಲೂಕಿನ, ದೊಡ್ಡತಪ್ಪಲು ಗ್ರಾಮದಲ್ಲಿ ಭೂ ಕುಸಿತವಾಗಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಕರ್ನಾಟಕಕ್ಕೆ ನಾನು ಬರುವುದನ್ನೇ ಸಹಿಸಲ್ಲ ಅಂದರೆ ನನ್ನಿಂದ ಏನು ನಿರೀಕ್ಷೆ ಮಾಡ್ತಾರೆ? ನಾನು ಬರಲೇಬಾರದು ಎನ್ನುವ ರೀತಿ ಹೇಳಿಕೆ ನೀಡುತ್ತಿದ್ದಾರೆ. ಮಂಡ್ಯಗೆ ಹೋದರೂ ಬೇಡ ಅಂತಾರೆ, ಉತ್ತರ ಕರ್ನಾಟಕ ಹೋಗ್ತಿನಿ ಅಂದರೆ ಅಲ್ಲಿಗೂ ಬೇಡ ಅಂತಾರೆ. ಸದ್ಯ ಹಾಸನಕ್ಕೆ ಬರಬೇಡಿ ಅನ್ನಲಿಲ್ಲ ಎಂದು ಗೇಲಿ ಮಾಡಿದರು.

ನಾನು, ಅಶೋಕ್ ಒಟ್ಟಿಗೆ ಬಂದಿದ್ದೇವೆ. ಇಲ್ಲಿ ಜಿಲ್ಲಾಡಳಿತ ಸೂಕ್ಷ್ಮವಾಗಿ ನೋಡಲು ಸ್ವಲ್ಪ ಸಹಕಾರ ಕೊಟ್ಟಿದ್ದಾರೆ‌. ನಿನ್ನೆ ಐದು ಕಿಲೋಮೀಟರ್ ಹಿಂದೆಯೇ ತಡೆಗೋಡೆ ಇಟ್ಟು ಏನೂ ಚಿತ್ರೀಕರಣ ಮಾಡದ ರೀತಿ ಆದೇಶ ಮಾಡಿದ್ದರು. ನಾನು ಯಾರನ್ನೂ ಟೀಕೆ ಮಾಡಲು ಹೋಗಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಪರಸ್ಪರ ವಿಶ್ವಾಸದಲ್ಲಿ ಕೆಲಸ ಮಾಡಬೇಕು ಎಂದರು.

ಪಾಪ ಡಿ.ಕೆ.ಶಿವಕುಮಾರ್ ಅವರು ಮಿಲಿಟರಿ ತರಬೇಕು ಎಂದು ಹೇಳಿದ್ದಾರೆ. ಈ ರಾಜ್ಯದಲ್ಲಿ ದರೋಡೆ ನಡೆಯುತ್ತಿದೆ. ಟೆರರಿಸ್ಟ್ ಆ್ಯಕ್ಟಿವಿಟಿಗಿಂತಲೂ ದರೋಡೆ ಚೆನ್ನಾಗಿ ನಡೆಯುತ್ತಿದೆ‌.
ದರೋಡೆ ಹೊಡೆಯುವುದನ್ನು ನಿಲ್ಲಿಸಿಲು ಮಿಲಿಟರಿ ಕರೆ ತರಲು ಹೇಳಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ನನ್ನನ್ನು ನೋಡಿದರೆ ಡಿಫ್ರೆಷನ್‌ನಲ್ಲಿ‌ ಇರುವವನ ತರ ಕಾಣುತ್ತೇನಾ? ಮಿಲಿಟರಿ ತರಲು ಏಕೆ ಹೇಳಿದ್ರು ಅಂತ ನಾನು ಯೋಚನೆ ಮಾಡುತ್ತಿದ್ದೇನೆ ಎಂದರು.

ಯಾವ ಸರ್ಕಾರವೂ ಹತ್ತು ಲಕ್ಷ ರೂ. ಪರಿಹಾರ ನೀಡಲು ಸಾಧ್ಯವೇ ಇಲ್ಲ ಎಂಬ ಸಚಿವ ಮಂಕಾಳ ವೈದ್ಯ ಹೇಳಿಕೆಗೆ ತಿರುಗೇಟಿ ನೀಡಿದ ಎಚ್.ಡಿ.ಕೆ., ಅವರಿಗೆ ಸಮಯ ಸಿಕ್ಕಿದರೆ ಕೊಡುಗಿಗೆ ಭೇಟಿ ನೀಡಲಿ. ನನ್ನ ಕಾಲದಲ್ಲಿ ಸಂತ್ರಸ್ತರಿಗೆ ಹತ್ತು ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಿಸಿದ್ದೇವೆ. ಒಂದು ಲಕ್ಷ ರೂ. ಪರಿಹಾರ ಕೊಟ್ಟಿದ್ದೇವೆ, ಐವತ್ತು ಸಾವಿರ ರೂ. ಪದಾರ್ಥ ಕೊಳ್ಳಲು ಕೊಟ್ಟಿದ್ದೇವೆ. ಗೊತ್ತಿಲ್ಲದೆ ಹೋದರೆ ಹೋಗಿ ನೋಡಿಕೊಂಡು ಬರಲಿ ಎಂದರು.