ಸಕಲೇಶಪುರ: ಬೆನ್ನಿಗಾನಹಳ್ಳಿ ಭೂಮಿ ಅಕ್ರಮ ಒತ್ತುವರಿ ಪ್ರಕರಣ ಕುರಿತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಶನಿವಾರ ಸಕಲೇಶಪುರದಲ್ಲಿ ಪ್ರತಿಕ್ರಿಯಿಸಿದ್ದು, ತಮ್ಮ ವಿರುದ್ಧದ ಪ್ರಕರಣ ರಾಜಕೀಯ ಪ್ರೇರಿತ ಎಂದು ಆರೋಪಿಸಿದರು.
“ರಾಮನಗರದಲ್ಲಿ ಅವನ್ಯಾರೋ ಸಾಮಾಜಿಕ ಪರಿವರ್ತನೆಕಾರ ಎಸ್.ಆರ್. ಹಿರೇಮಠ್ ರಿಪೋರ್ಟ್ ಮೇಲಿನ ಪ್ರಕರಣ ಇದು. ಮೈತ್ರಿ ಎಂಬುವವರನ್ನು ಕಾನೂನುಬಾಹಿರವಾಗಿ ನೇಮಕ ಮಾಡಿಕೊಂಡು 370 ಜನರನ್ನು ಬೀದಿಗೆ ತಂದರು ನಾನು ಅವರ ಪರ ಹೋರಾಟ ಮಾಡಿದ್ದಕ್ಕೆ ಈ ಪ್ರಕರಣ,” ಎಂದು ಆಕ್ರೋಶ ಹೊರ ಹಾಕಿದರು.
ರಾಜಕೀಯ ಪಿತೂರಿ ಆರೋಪ
“ಸಿದ್ದಪ್ಪ ಅವರು ಆ ಸಮಯದಲ್ಲಿ ರಾಮನಗರದ ಅಸಿಸ್ಟೆಂಟ್ ಕಮಿಷನರ್ ಆಗಿದ್ದರು. ಅವರಿಂದ ಒಂದು ವರದಿ ಕೊಡಿಸಿಕೊಂಡು ಈ ರಾಜಕೀಯ ಆಟ ಆಡುತ್ತಿದ್ದಾರೆ. ಯಡಿಯೂರಪ್ಪ ಅವರ ಕಾಲದಲ್ಲೂ ಈ ಪ್ರಕರಣದ ತನಿಖೆ ನಡೆಸಿದ್ದರು, ಏನೂ ಸಿಗಲಿಲ್ಲ. ಈಗ ಮತ್ತೆ ಅದೇ ನಾಟಕ ನಡೀತಿದೆ,” ಎಂದು ಕುಮಾರಸ್ವಾಮಿ ಆರೋಪಿಸಿದರು.
“ನಾನು ಭಯಪಡುವುದಿಲ್ಲ”
“ನಾನು ಕಷ್ಟಪಟ್ಟು ಸಂಪಾದನೆ ಮಾಡಿರುವುದಕ್ಕೆ ಇಂದು ನನ್ನನ್ನು ಗುರಿಯಾಗಿಸಲಾಗಿದೆ. ಆದರೆ ಲೂಟಿ ಮಾಡಿ ಹಣ ಸಂಪಾದಿಸಿದವರನ್ನು ಯಾರೂ ಪ್ರಶ್ನಿಸುತ್ತಿಲ್ಲ. ನಾನು ಈ ಎಲ್ಲಾ ರಾಜಕೀಯ ದಾಳಿಗಳಿಗೆ ಹೆದರಿಕೊಳ್ಳುವವರಲ್ಲ, ಮುಂದೆ ಏನಾಗುತ್ತದೋ ನೋಡೋಣ,” ಎಂದು ಅವರು ಸವಾಲು ಹಾಕಿದರು.