ಗ್ಯಾರೆಂಟಿಗಳಿಗೆ ಹಣ ಹೊಂದಿಸಲು‌ ಸರ್ಕಾರದಿಂದ ಜನರಿಗೆ ಬರೆ: ಎಚ್.ಡಿ.ಕೆ. ವಾಗ್ದಾಳಿ

ಹಾಸನ, ಫೆಬ್ರವರಿ 15: “ಯಾವ ಪಕ್ಷದಲ್ಲಿ ಯಾರನ್ನು ನಾಯಕ ಮಾಡಿಕೊಂಡರೇನು, ಯಾರನ್ನು ತೆಗೆದೆರೇನು, ಅದು ರಾಜ್ಯದ ಜನತೆಗೆ ತಲೆಕೆಡಿಸಿಕೊಳ್ಳುವ ವಿಷಯವಲ್ಲ. ಆದರೆ, ರಾಜ್ಯದ ಸಮಸ್ಯೆಗಳಿಗೆ ಯಾರು ಉತ್ತರ ಕೊಡುತ್ತಾರೆ?” ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಸರ್ಕಾರದ ವಿರುದ್ಧ ಕಿಡಿ ಕಾರಿದರು. ಸಕಲೇಶಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜನಸಾಮಾನ್ಯರ ಸಮಸ್ಯೆಗಳ ಕಡೆಗೆ ಸರ್ಕಾರ ಸಂಪೂರ್ಣ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಆರೋಪಿಸಿದರು.

ಕಾಡಾನೆ ಸಮಸ್ಯೆ: ಸರ್ಕಾರದ ನಿರ್ಲಕ್ಷ್ಯ

ಹಾಸನ ಜಿಲ್ಲೆಯ ಹಲವೆಡೆ ಕಾಡಾನೆ ದಾಳಿಯಿಂದ ಜನ ಸಾವನ್ನಪ್ಪಿದ್ದಾರೆ. “ಈ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆಯೇ? ಅರಣ್ಯ ಇಲಾಖೆ ಮಂತ್ರಿಗಳು 65% ರೈಲ್ವೆ ಬ್ಯಾರಿಕೇಡ್ ಹಾಕಲಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ ಅದು 2018ರಲ್ಲೇ ನಾನು ನೀಡಿದ ಹಣದಿಂದ ನಿರ್ಮಿಸಲಾಗಿದೆ. ಅದಾದ ಮೇಲೆ ಸರ್ಕಾರ ಯಾವುದೇ ಹೊಸ ಪ್ರಯತ್ನ ಮಾಡಿದೆಯೇ?” ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಬೆಂಗಳೂರು ಮೆಟ್ರೋ ದರ ಏರಿಕೆ: ಜನಸಾಮಾನ್ಯರ ಮೇಲೆ ಹೊರೆ

“ಬೆಂಗಳೂರು ಮೆಟ್ರೋ ದರ ಏರಿಕೆಯು ನೇರವಾಗಿ ಜನಸಾಮಾನ್ಯರ ಮೇಲೆ ಹೊರೆ ಹೇರಿದೆ. ಪ್ರತಿ ದಿನ ಐದು ಗ್ಯಾರಂಟಿಗಳನ್ನು ಪೂರೈಸಲು ಸರ್ಕಾರ ಜನರ ಕಡೆಯಿಂದ ಹಣ ಸುಲಿಯುತ್ತಿದೆ. ರಾಜ್ಯದಲ್ಲಿ ಯಾವುದೇ ವಾಸ್ತವಿಕ ಅಭಿವೃದ್ಧಿ ಕಾಣುತ್ತಿಲ್ಲ. ಸರ್ಕಾರ ಜವಾಬ್ದಾರಿಯುತ ಕಾರ್ಯ ನಿರ್ವಹಿಸುತ್ತಿಲ್ಲ” ಎಂದು ಅವರು ಕಿಡಿಕಾರಿದರು.

ಕೆಪಿಎಸ್‌ಸಿ ನೇಮಕಾತಿ: ಯುವಕರ ಭವಿಷ್ಯ ಹಾಳು

2014ರ ಕೆಪಿಎಸ್‌ಸಿ ನೇಮಕಾತಿಯ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. “ಮೈತ್ರಿ ಎಂಬ ಒಬ್ಬ ಹೆಣ್ಣುಮಗಳಿಗಾಗಿ 370 ಜನರ ಭವಿಷ್ಯವನ್ನು ಹೊಡೆದು ಹಾಕಿದರು. ಈಗ 2025ಕ್ಕೆ ಬಂದಿದ್ದೇವೆ, ಆದರೆ ಕೆಪಿಎಸ್‌ಸಿ ವ್ಯವಸ್ಥೆಯಲ್ಲಿ ಏನಾದರೂ ಸುಧಾರಣೆ ಕಂಡಿದ್ದೇ? ಒಬ್ಬರು ಕೂಡ ಕೆಪಿಎಸ್‌ಸಿ ಮೂಲಕ ಉದ್ಯೋಗ ಪಡೆಯಲು ಸಾಧ್ಯವಾಗುತ್ತಿಲ್ಲ” ಎಂದು ಅವರು ವಾಗ್ದಾಳಿ ನಡೆಸಿದರು.

“ಹದಿನೈದು ಜನ ಸದಸ್ಯರನ್ನು ನೇಮಿಸಿ ಏನು ಸುಧಾರಣೆ ತಂದುಕೊಟ್ಟರು? ಇಂದು ಕೆಪಿಎಸ್‌ಸಿ ಪರೀಕ್ಷೆ ನಡೆಸಲು ಸಾಧ್ಯವಾಗುತ್ತಿಲ್ಲ. ಯುವಕರ ಭವಿಷ್ಯವನ್ನು ಹಾಳು ಮಾಡುತ್ತಿದ್ದಾರೆ. ಸರ್ಕಾರ ಈ ಕುರಿತು ಗಮನ ಹರಿಸಬೇಕು” ಎಂದು ಎಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದರು.

“ರಾಜ್ಯದಲ್ಲಿ ಸರ್ಕಾರವಿದೆ ಎಂಬುದೇ ಜನ ಮರೆತಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಮೊದಲು ಜನಸಾಮಾನ್ಯರ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಗಂಭೀರವಾಗಿ ಗಮನಹರಿಸಲಿ” ಎಂದು ಅವರು ಬೇಸರ ವ್ಯಕ್ತಪಡಿಸಿದರು.