ಹಾಸನ: ಜಿಲ್ಲೆಯಲ್ಲಿ ಹೊಸ ವರ್ಷಾಚರಣೆ ಅವಘಡಕ್ಕೆ ಮತ್ತೊಂದು ದುರ್ಘಟನೆ ಸೇರ್ಪಡೆಯಾಗಿದೆ. ಹೊಸ ವರ್ಷಾಚರಣೆ ವೇಳೆ ಕೃಷಿ ಹೊಂಡದಲ್ಲಿ ಮುಳುಗಿ ಇಬ್ಬರು ಯುವಕರು ಧಾರುಣವಾಗಿ ಮೃತಪಟ್ಟ ಘಟನೆ ಬೇಲೂರು ತಾಲ್ಲೂಕಿನ ಕಾನನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕೃಷಿಕ ಅಜಿತ್ (37) ಮತ್ತು ಆಟೋ ಚಾಲಕ ಅಶೋಕ್ (35) ಮೃತರು.
ಘಟನೆ ವಿವರ:
ಕಾನನಹಳ್ಳಿ ಗ್ರಾಮದ ಕೆರೆಯ ಬಳಿ ನ್ಯೂ ಇಯರ್ ಪಾರ್ಟಿ ಮಾಡುತ್ತಿದ್ದ ಇಬ್ಬರೂ ಬೆಳಗಿನವರೆಗೂ ಮನೆಗೆ ಹಿಂತಿರುಗಿರಲಿಲ್ಲ. ಇದರಿಂದಾಗಿ ಕಳವಳಗೊಂಡ ಪೋಷಕರು ಮತ್ತು ಗ್ರಾಮಸ್ಥರು ಹುಡುಕಾಟ ನಡೆಸಿದರು.
ಸ್ಥಳೀಯರು ಗುರುಪ್ರಸಾದ್ ಎಂಬುವವರ ಕೃಷಿ ಹೊಂಡದ ಬಳಿ ಬಿದ್ದಿದ್ದ ಚಪ್ಪಲಿ ಮತ್ತು ಮದ್ಯದ ಬಾಟಲಿಗಳನ್ನು ಗಮನಿಸಿ ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ಅನುಮಾನಗೊಂಡು ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಯ ನೆರವಿನಿಂದ ಶೋಧಕಾರ್ಯ ಕೈಗೊಳ್ಳಲಾಯಿತು. ಇಂದು ಸಂಜೆ ಹೊಂಡದಲ್ಲಿ ಇಬ್ಬರ ಶವ ಪತ್ತೆಯಾಯಿತು.
ಶವಗಳನ್ನು ಕೆರೆಯಿಂದ ಹೊರತೆಗೆದು, ಬೇಲೂರು ತಾಲ್ಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಈ ಕುರಿತು ಹೆಚ್ಚಿನ ತನಿಖೆ ಆರಂಭಿಸಲಾಗಿದೆ.
ಸ್ಥಳೀಯರಿಗೆ ಆಘಾತ:
ಕಾನನಹಳ್ಳಿ ಮತ್ತು ಲಕ್ಷ್ಮಿಪುರ ಗ್ರಾಮಗಳಲ್ಲಿ ಈ ದುರ್ಘಟನೆ ಆಘಾತ ಮೂಡಿಸಿದೆ. ಮೃತರ ಕುಟುಂಬ ಸದಸ್ಯರ ರೋಧನೆ ಮುಗಿಲು ಮುಟ್ಟಿದೆ. ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.