ಹಾಸನ: ರಸ್ತೆ ಕಾಣದಷ್ಟು ದಟ್ಟ‌ ಹನಿಗಳ ಭಾರಿ ಮಳೆಯಿಂದ ದುರಂತ: ಕ್ರಾಶ್ ಬ್ಯಾರಿಯರ್ ಗುದ್ದಿದ ಎರ್ಟಿಗಾ ಕಾರು- ಇಬ್ಬರು ಯುವಕರ ಸಾವು

ಕಾರಿನಲ್ಲಿದ್ದ ಯುವಕರಿಗೆ ತೀವ್ರ ಗಾಯಗಳಾದ್ದರಿಂದ ಮಳೆಯ ನೀರಿನೊಂದಿಗೆ ಸೇರಿ ರಕ್ತ ಹಳ್ಳದಂತೆ ಹರಿದಿದ್ದು ಘಟನೆಯ ಭೀಕರತೆಗೆ ಸಾಕ್ಷಿಯಾಗಿತ್ತು

ಹಾಸನ, ಮೇ 26: ಸಕಲೇಶಪುರ ತಾಲ್ಲೂಕಿನ ಬಾಗೆ ಗ್ರಾಮದ ಸಮೀಪ ಭಾರೀ ಮಳೆಯಿಂದ ರಸ್ತೆ ಕಾಣದೆ ಎರ್ಟಿಗಾ ಕಾರೊಂದು ರಸ್ತೆ ಬದಿಯ ಕ್ರಾಶ್ ಬ್ಯಾರಿಯರ್ ಗೆ  ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿರುವ ದಾರುಣ ಘಟನೆ ಇಂದು ನಡೆದಿದೆ.

ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ನಾಲ್ವರು ಯುವಕರಿದ್ದ ಕಾರಿನ ಚಾಲಕನಿಗೆ ಭಾರೀ ಮಳೆಯಿಂದ ರಸ್ತೆ ಸರಿಯಾಗಿ ಕಾಣದೆ ನಿಯಂತ್ರಣ ತಪ್ಪಿ ಈ ದುರ್ಘಟನೆ ಸಂಭವಿಸಿದೆ.

ಮೃತರನ್ನು ಬೆಂಗಳೂರು ಮೂಲದ ಅಭಿಷೇಕ್ (27) ಮತ್ತು ಶರತ್ (28) ಎಂದು ಗುರುತಿಸಲಾಗಿದೆ. ಗಾಯಗೊಂಡ ಧನಂಜಯ ಮತ್ತು ಸಂದೀಪ್‌ಗೆ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಈ ಘಟನೆಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.