ಸಿಡಿಲು ಬಡಿದು ಇಬ್ಬರು ಮಹಿಳೆಯರ ಸಾವು, ಮೂವರಿಗೆ ಗಾಯ: ಮಳೆಯಿಂದ ರಕ್ಷಣೆ ಪಡೆಯಲು ಮರದ ಕೆಳಗೆ ನಿಂತಿದ್ದ ದುರ್ದೈವಿಗಳು

ಗಂಭೀರ ಸ್ಥಿತಿಯಲ್ಲಿರುವ ಮಹಿಳೆ ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲು

ಹಾಸನ : ಮಳೆಯಿಂದ ರಕ್ಷಣೆ ಪಡೆಯಲು ಮರದ ಕೆಳಗೆ ನಿಂತಿದ್ದ ಇಬ್ಬರು ಮಹಿಳೆಯರು ಸಿಡಿಲು ಸ್ಥಳದಲ್ಲೇ ಮೃತಪಟ್ಟು ಮೂವರು ಗಾಯಗೊಂಡ ಘಟನೆ ಅರಕಲಗೂಡು ತಾಲ್ಲೂಕಿನ ದೊಡ್ಡಮಗ್ಗೆ ಗ್ರಾಮದಲ್ಲಿ ನಡೆದಿದೆ.

ಮುತ್ತಮ್ಮ (70), ಪುಟ್ಟಮ್ಮ (63) ಮೃತ ದುರ್ದೈವಿಗಳು. ಮೂವರು ಮಹಿಳೆಯರು ಗಾಯಗೊಂಡಿದ್ದು, ಗಂಭೀರ ಸ್ಥಿತಿಯಲ್ಲಿರುವ ಒಬ್ಬರನ್ನು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದಿಬ್ಬರು ಅರಕಲಗೂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಂದು ಮಧ್ಯಾಹ ಜೋಳ ಬಿತ್ತನೆಯಲ್ಲಿ ತೊಡಗಿದ್ದ ಮಹಿಳೆಯರು ಗುಡುಗು, ಸಿಡಿಲಿನ ಆರ್ಭಟದ ಸಹಿತ ಆರಂಭವಾದ ಮಳೆಯಿಂದ ರಕ್ಷಣೆ ಪಡೆಯಲು ಜಮೀನಿನಲ್ಲೇ ಇದ್ದ ಮರದ ಕೆಳಗೆ ಆಶ್ರಯ ಪಡೆದಿದ್ದರು.

ಮರಕ್ಕೆ ದಿಢೀರ್ ಬಡಿದ ಸಿಡಿಲು ಕೆಳಗೆ ನಿಂತಿದ್ದ ಇಬ್ಬರ ಪ್ರಾಣ ತೆಗೆದರೆ ಮೂವರು ಮಹಿಳೆಯರು ಕುಸಿದು ಬಿದ್ದರು. ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದರು.