ಪ್ರಜ್ವಲ್ ರೇವಣ್ಣ ಹಗರಣ ತನಿಖೆಗೆ ಎಸ್ಐಟಿಗೆ ಬಂದರು ಇಬ್ಬರು ಮಹಿಳಾ ಐಪಿಎಸ್ ಅಧಿಕಾರಿಗಳು

ಬೆಂಗಳೂರು: ಮಹಿಳೆಯರ ಮೇಲೆ ಸಂಸದ ಪ್ರಜ್ವಲ್ ರೇವಣ್ಣ ನಡೆಸಿದ್ದಾರೆನ್ನಲಾದ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರ ರಚಿಸಿರುವ ಎಸ್.ಐ.ಟಿ.ಗೆ ಇಬ್ಬರು ಮಹಿಳಾ ಐಪಿಎಸ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.

ಸಿಐಡಿ ಎಡಿಜಿಪಿ ಬಿಜಯ್ ಕುಮಾರ್ ಸಿಂಗ್ ಎಸ್.ಐ.ಟಿ. ಮುಖ್ಯಸ್ಥರಾಗಿದ್ದು, ಖಡಕ್ ಅಧಿಕಾರಿಗಳೆಂದು ಗುರುತಿಸಿಕೊಂಡಿರುವ ಮೈಸೂರು ಎಸ್ಪಿ ಸೀಮಾ ಲಾಟ್ಕರ್, ಪೊಲೀಸ್ ಪ್ರಧಾನ ಕಚೇರಿ ಸಹಾಯಕ ಪೊಲೀಸ್ ಮಹಾ ನಿರೀಕ್ಷಕಿ ಸುಮನ್ ಡಿ.ಪೆನ್ನೇಕರ್ ಅವರನ್ನು ನೇಮಿಸಲಾಗಿದೆ.

ಎಸ್.ಐ.ಟಿ. ರಚನೆ ಸಂಬಂಧ ಸರ್ಕಾರ ಹೊರಡಿಸಿರುವ ಸರ್ಕಾರದ ಆದೇಶದ ಸಾರಾಂಶ ಇಂತಿದೆ:

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಹಾಸನ ಜಿಲ್ಲೆಯಲ್ಲಿ ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಹಾಗೂ ಈ ಸಂಬಂಧ ಹಾಸನ ಜಿಲ್ಲೆಯ ಹೊಳೆನರಸೀಪುರ ಟೌನ್ ಪೊಲೀಸ್ ಠಾಣೆಯ ಕ್ರಿಮಿನಲ್ ಮೊಕದ್ದಮೆ ಸಂಖ್ಯೆ:107/2024 354A, 354D, 506, 509 ಐಪಿಸಿ ಅಡಿ ದಾಖಲಾಗಿರುವ‌ ಪ್ರಕರಣದ ಸಮಗ್ರ ತನಿಖೆಯನ್ನು ಕೈಗೊಳ್ಳಲು ತಾಂತ್ರಿಕ ಪರಿಣತಿ ಇರುವ ರಾಜ್ಯದ ವಿಶೇಷ ತನಿಖಾ ಸಂಸ್ಥೆಯಾದ ಸಿಐಡಿಯ ಒಂದು ವಿಶೇಷ ತನಿಖಾ ತಂಡ (Special Investigation Team) ವನ್ನು ರಚಿಸಿ ಸರ್ಕಾರವು ಆದೇಶಿಸಿದೆ.

ಮುಖ್ಯಸ್ಥರು:
1. ಶ್ರೀ ಬಿಜಯ ಕುಮಾರ್ ಸಿಂಗ್, ಐಪಿಎಸ್. ಅಪರ ಪೊಲೀಸ್ ಮಹಾ ನಿರ್ದೇಶಕರು, ಸಿಐಡಿ, ಬೆಂಗಳೂರು.

ಸದಸ್ಯರು:

2. ಶ್ರೀಮತಿ ಸುಮನ್ ಡಿ ಪೆನ್ನೇಕರ್, ಐಪಿಎಸ್, ಸಹಾಯಕ ಪೊಲೀಸ್ ಮಹಾ ನಿರೀಕ್ಷಕರು, ಪೊಲೀಸ್ ಪ್ರಧಾನ ಕಛೇರಿ, ಬೆಂಗಳೂರು.

3. ಶ್ರೀಮತಿ ಸೀಮಾ ಲಾಟ್ಕರ್, ಐಪಿಎಸ್, ಪೊಲೀಸ್ ಅಧೀಕ್ಷಕರು, ಮೈಸೂರು ಜಿಲ್ಲೆ.

ಈ ಪ್ರಕರಣದ ಕುರಿತು ರಾಜ್ಯದ ಇತರೆ ಪೊಲೀಸ್ ಠಾಣೆಗಳಲ್ಲಿ ದಾಖಲಾದ / ದಾಖಲಾಗಬಹುದಾದ ಪ್ರಕರಣಗಳನ್ನು ಡಿಜಿ & ಐಜಿಪಿ ರವರು ಈ ವಿಶೇಷ ತನಿಖಾ ತಂಡ (Special Investigation Team) ಕ್ಕೆ ವರ್ಗಾಯಿಸುವುದು ಹಾಗೂ ವಿಶೇಷ ತನಿಖಾ ತಂಡಕ್ಕೆ ಪ್ರಕರಣದ ತನಿಖೆಗಾಗಿ ಇತರೆ ಸದಸ್ಯರುಗಳ ಅವಶ್ಯವಿದ್ದಲ್ಲಿ ಡಿಜಿ & ಐಜಿಪಿ ರವರ ಅನುಮೋದನೆಯೊಂದಿಗೆ ತನಿಖಾ ತಂಡಕ್ಕೆ ಸೇರಿಸಿಕೊಳ್ಳುವುದು.

ವಿಶೇಷ ತನಿಖಾ ತಂಡವು (Special Investigation Team) ಸಿಐಡಿಯಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಳ್ಳುವುದು.

ಪೊಲೀಸ್ ಮಹಾ ನಿರ್ದೇಶಕರು, ಸಿಐಡಿ, ರವರ ಮೇಲ್ವಿಚಾರಣೆಯಲ್ಲಿ ಈ ವಿಶೇಷ ತನಿಖಾ ತಂಡ (Special Investigation Team) ವು ಕಾರ್ಯನಿರ್ವಹಿಸುವುದು.

ಎಸ್‌ಐಟಿ ತಂಡವು ಈ ಪ್ರಕರಣದ ಸಮಗ್ರ ತನಿಖೆಯನ್ನು ನಡೆಸಿ, ತನಿಖಾ ವರದಿಯನ್ನು ಮಹಾ ನಿರ್ದೇಶಕರು ಹಾಗೂ ಆರಕ್ಷಕ ಮಹಾ ನಿರೀಕ್ಷಕರು, ಬೆಂಗಳೂರು ರವರ ಮುಖಾಂತರ ಶೀಘ್ರವಾಗಿ ಸರ್ಕಾರಕ್ಕೆ ಸಲ್ಲಿಸತಕ್ಕದ್ದು ಎಂದು ಒಳಾಡಳಿತ ಇಲಾಖೆ ಅಧೀನ‌ ಕಾರ್ಯದರ್ಶಿ ಎಸ್.ಅಂಬಿಕಾ ಆದೇಶಿಸಿದ್ದಾರೆ.