ಹಾಸನ, ಮಾರ್ಚ್ 13: ಜಿಲ್ಲೆಯಲ್ಲಿ ಸರಗಳ್ಳತನದ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಇಬ್ಬರು ಮಹಿಳೆಯರು ತಮ್ಮ ಬೆಲೆಬಾಳುವ ಚಿನ್ನದ ಸರಗಳನ್ನು ಕಳಕೊಂಡಿದ್ದಾರೆ.
ಸಕಲೇಶಪುರ ತಾಲ್ಲೂಕಿನ ಹೆನ್ನಲಿ ಗ್ರಾಮದ ಸೇತುವೆ ಬಳಿ ಚೋರರ ಕೈಚಳಕ:
ಹೆನ್ನಲಿ ಗ್ರಾಮದ ಸೇತುವೆ ಬಳಿ ನಡೆದ ಈ ಘಟನೆಯಲ್ಲಿ, ಸುನೀತಾ ಎಂಬ ಮಹಿಳೆ ಚೋರರ ಕೈಚಳಕಕ್ಕೆ ತಮ್ಮ ಸರ ಕಳೆದುಕೊಂಡಿದ್ದಾರೆ. ವಿಳಾಸ ಕೇಳುವ ನೆಪದಲ್ಲಿ ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಬಂದ ಇಬ್ಬರು ಆರೋಪಿಗಳು, ಅವರ ಕುತ್ತಿಗೆಯಲ್ಲಿದ್ದ ಸುಮಾರು ಐದು ಲಕ್ಷ ರೂ. ಮೌಲ್ಯದ ಚಿನ್ನದ ಸರ ಕಸಿದು ಪರಾರಿಯಾದ ಘಟನೆ ನಡೆದಿದೆ. ಈ ಸಂಬಂಧ ಯಸಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆ.ಆರ್.ಪುರಂನಲ್ಲಿ ಮತ್ತೊಂದು ಕಳವು:
ಇನ್ನು, ಹಾಸನದ ಕೆ.ಆರ್.ಪುರಂನಲ್ಲೂ ಸರಗಳ್ಳತನ ಪ್ರಕರಣ ನಡೆದಿದೆ. ಬೆಳಗ್ಗೆ ವಾಕ್‌ಗಾಗಿ ಪತಿ ಹಾಗೂ ಸೊಸೆಯೊಂದಿಗೆ ಹೋಗಿದ್ದ ರಾಜೇಶ್ವರಿ ಎಂಬ ಮಹಿಳೆಯ ಸರ ದೋಚಲಾಗಿದೆ.
50 ಗ್ರಾಂ ಚಿನ್ನದ ಮಾಂಗಲ್ಯ ಸರ ಹಾಗೂ 10 ಗ್ರಾಂನ ಚಿನ್ನದ ಸರ ಕಿತ್ತುಕೊಂಡು ಅಪರಿಚಿತರು ಎಸ್ಕೇಪ್ ಆಗಿದ್ದಾರೆ. ಡ್ಯೂಕ್ ಸ್ಕೂಟರ್‌ನಲ್ಲಿ ಬಂದ ಇಬ್ಬರು ಚೋರರು, ಮುಖಕ್ಕೆ ಮಾಸ್ಕ್ ಹಾಗೂ ತಲೆಗೆ ಕಪ್ಪು ಹೆಲ್ಮೆಟ್ ಧರಿಸಿ ಈ ಅಪರಾಧ ಎಸಗಿದ್ದಾರೆ. ಈ ಸಂಬಂಧ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.