ಸಕಲೇಶಪುರ: ರಸ್ತೆ ಬದಿ ನಿಲ್ಲಿಸಿದ್ದ ಬೊಲೆರೊ ಜೀಪ್ ಗೆ ಇನ್ನೋವಾ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಂಭೀರ ಗಾಯಗೊಂಡು, ಐವರಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ತಾಲ್ಲೂಕಿನ ಬಾಳ್ಳುಪೇಟೆ ಸಮೀಪದ ನಿಡನೂರು ಕೂಡಿಗೆ ಬಳಿ ಗುರುವಾರ ಸಂಜೆ ನಡೆದಿದೆ.
ಬೊಲೆರೊ ಜೀಪ್‌ನಲ್ಲಿದ್ದ ಹಾಸನ ಮೂಲದ ಹನುಮಂತ (50) ಹಾಗೂ ಚಿದಾನಂದ (32) ಗಂಭೀರವಾಗಿ ಗಾಯಗೊಂಡಿದ್ದು ಹಿಮ್ಸ್ ಗೆ ದಾಖಲಿಸಲಾಗಿದೆ.
ಇನ್ನೋವಾ ಕಾರಿನಲ್ಲಿದ್ದ ಐವರು ಧರ್ಮಸ್ಥಳದಲ್ಲಿ ಮಂಜುನಾಥಸ್ವಾಮಿ ದರ್ಶನ ಪಡೆದು ಬೆಂಗಳೂರಿಗೆ ತೆರಳುತ್ತಿದ್ದರು. ಈ ವೇಳೆ ಹನುಮಂತ ಹಾಗೂ ಚಿದಾನಂದ ಅವರು ರಸ್ತೆ ಬದಿಯ ಕ್ಯಾಂಟೀನ್‌ನಲ್ಲಿ ಟೀ ಕುಡಿದು ಜೀಪ್ ಹತ್ತಿ ಕುಳಿತಿದ್ದರು. ಈ ವೇಳೆ ಹಿಂದಿನಿಂದ ವೇಗವಾಗಿ ಬಂದ ಕಾರು, ಜೀಪ್ ಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಜೀಪು ಮಗುಚಿ ಬಿದ್ದಿದ್ದರಿಂದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾರು ಕೂಡ ರಸ್ತೆ ಬದಿಯ ಹೊಂಡಕ್ಕೆ ಬಿದ್ದಿದ್ದರಿಂದ ಕಾರಿನಲ್ಲಿದ್ದ ಇಬ್ಬರು ಮಹಿಳೆಯರು ಸೇರಿ ಒಟ್ಟು ಐದು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಹಾಸನದ ಹಿಮ್ಸ್ ಗೆ ದಾಖಲಿಸಲಾಗಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.