ದುರ್ವಿಧಿಗೆ ಸಿಲುಕಿದ ಇಂಜಿನಿಯರಿಂಗ್ ವಿದ್ಯಾರ್ಥಿಗಳ ವೀಕೆಂಡ್ ಟ್ರಿಪ್; ಕಾರು ಪಲ್ಟಿಯಾಗಿ ಇಬ್ಬರ ಸಾವು, ಓರ್ವನ ಸ್ಥಿತಿ ಚಿಂತಾಜನಕ; ನೆರವಿನ ಹಸ್ತಚಾಚಿ ಮಾನವೀಯತೆ ಮೆರೆದ ಶಾಸಕ ಸಿ.ಎನ್.ಬಾಲಕೃಷ್ಣ

ಹಾಸನ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ ಕಾರಿನಲ್ಲಿದ್ದ ಐವರು ಇಂಜಿನಿಯರಿಂಗ್ ವಿದ್ಯಾರ್ಥಿಗಳ ಪೈಕಿ ಇಬ್ಬರು ಮೃತಪಟ್ಟಿದ್ದು, ಮೂವರು ಗಾಯಗೊಂಡ ಘಟನೆ ಚನ್ನರಾಯಪಟ್ಟಣ ತಾಲ್ಲೂಕಿನ, ಗೌಡಗೆರೆ ಸಮೀಪ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಇಂದು ಸಂಜೆ ನಡೆದಿದೆ.

ಬೆಂಗಳೂರಿನ ಕಾಲೇಜೊಂದರ ಸೂರಜ್ (19), ಅನೀಶ್ (18) ಮೃತ ವಿದ್ಯಾರ್ಥಿಗಳು. ಭುವನ್ (18) ಸ್ಥಿತಿ ಗಂಭೀರವಾಗಿದ್ದು ಆತನನ್ನು ಬೆಳ್ಳೂರು ಕ್ರಾಸ್ ನ ಬಿಜಿಎಸ್ ಆಸ್ಪತ್ರೆಗೆ ರವಾನಿಸಲಾಗಿದೆ. ವಿಶಾಲ್ (19), ಪೂರ್ಣಚಂದ್ರ (18) ಎಂಬ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಚನ್ನರಾಯಪಟ್ಟಣ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಳ್ಳದಲ್ಲಿ ಬಿದ್ದವನನ್ನು ರಕ್ಷಿಸುತ್ತಿರುವ ಸ್ಥಳೀಯರು

KA-17-Z-2236 ನಂಬರ್‌ನ ಇಕೋ‌ ಸ್ಪೋರ್ಟ್ ಕಾರಿನಲ್ಲಿ ಬೆಂಗಳೂರಿನಿಂದ ಮಂಗಳೂರು ಕಡೆಗೆ ಐವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ವೀಕೆಂಡ್ ಟ್ರಿಪ್ ಗೆ ತೆರಳುತ್ತಿದ್ದರು. ಅತಿವೇಗದಿಂದ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಕಾರು ಪಲ್ಟಿಯಾಗಿದ್ದಲ್ಲದೇ ಸುಮಾರು 25ಮೀ. ದೂರದ ಹಳ್ಳಕ್ಕೆ ಬಿದ್ದಿದೆ.

ಕಾರಿನಿಂದ ಆಚೆ ಬಿದ್ದು ಮೃತಪಟ್ಟ ಯುವಕ

ಕಾರು ಪಲ್ಟಿಯಾದ ರಭಸಕ್ಕೆ ಮೂವರು ಕಾರಿನಿಂದ ಆಚೆಗೆ ಹಾರಿದ್ದು ಇಬ್ಬರು ಹಳ್ಳದ ನೀರಿಗೆ ಬಿದ್ದಿದ್ದಾರೆ. ಒಬ್ಬಾತ ಪಕ್ಕದ ಜಮೀನಿನ ಬದುವಿನ‌ ಮೇಲೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ. ಕಾರಿನಿಂದ ಆಚೆ ಬಿದ್ದ ಇಬ್ಬರು ಮೃತರಾಗಿದ್ದಾರೆ.

ಅದೇ ಮಾರ್ಗವಾಗಿ ಚನ್ನರಾಯಪಟ್ಟಣಕ್ಕೆ ತೆರಳುತ್ತಿದ್ದ ಶಾಸಕ ಸಿ.ಎನ್.ಬಾಲಕೃಷ್ಣ ಅಪಘಾತದ ಸುದ್ದಿ ತಿಳಿದು ಕಾರು ನಿಲ್ಲಿಸಿ ಗಾಯಾಳುಗಳನ್ನು ಚನ್ನರಾಯಪಟ್ಟಣ ತಾಲ್ಲೂಕು ಆಸ್ಪತ್ರೆಗೆ ರವಾನಿಸಿ ಮಾನವೀಯತೆ‌ ಮೆರೆದಿದ್ದಾರೆ. ಸ್ಥಳದಲ್ಲೇ ಮೃತರಾದ ವಿದ್ಯಾರ್ಥಿಗಳ ಮೃತದೇಹಗಳನ್ನೂ ಚನ್ನರಾಯಪಟ್ಟಣದ ಸರ್ಕಾರಿ ಆಸ್ಪತ್ರೆ ಶವಾಗಾರಕ್ಕೆ ರವಾನಿಸಿದರು. ನಂತರ ಶಾಸಕರು ಆಸ್ಪತ್ರೆಗೂ ತೆರಳಿ ಗಾಯಾಳುಗಳ ಚಿಕಿತ್ಸೆ ನಿಗಾ ವಹಿಸಿದರು.

ಚನ್ನರಾಯಪಟ್ಟಣ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.