ಅರಸೀಕೆರೆ: ಜೇನುಕಲ್ ಸಿದ್ದೇಶ್ವರ ಕ್ಷೇತ್ರಕ್ಕೆ ದಾನ ಕೋರುವ ನೆಪದಲ್ಲಿ ಒಂಟಿ ಮನೆಯೊಂದಕ್ಕೆ ನುಗ್ಗಿದ್ದ ನಕಲಿ ಸ್ವಾಮೀಜಿಗಳಿಬ್ಬರು ಹಾಗೂ ಮೂವರು ಸಹಚರರನ್ನು. ತಾಲೂಕಿನ ಕಣಕಟ್ಟೆ ಹೋಬಳಿ ಸೋಮಶೆಟ್ಟಿಹಳ್ಳಿ ಗ್ರಾಮಸ್ಥರು ಹಿಡಿದು ಬಾಣಾವರ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.
ಭಾನುವಾರ ಬೆಳಗ್ಗೆ ಗ್ರಾಮಕ್ಕೆ ಕಾವಿಧಾರಿಯಾಗಿ ಬಂದಿದ್ದು ಐವರು ತೋಟದಲ್ಲಿರುವ ದಾನಶೇಖರಪ್ಪ ಅವರ ಒಂಟಿ ಮನೆಗೆ ದಿಢೀರ್ ನುಗ್ಗಿ ನಾವು ಜೇನುಕಲ್ ಸಿದ್ದೇಶ್ವರ ಸ್ವಾಮಿ ಮಠದವರಾಗಿದ್ದು ಹೆಚ್ಚಿನ ಸಹಾಯ ಮಾಡಬೇಕು. ಇದರಿಂದ ಮಠದ ಅಭಿವೃದ್ಧಿಗೆ ಸಹಾಯವಾಗಲಿದೆ ಎಂದು ಬೇಡಿಕೆ ಮುಃದಿಟ್ಟಿದ್ದಾರೆ.
ಅವರ ನಡವಳಿಕೆ ಅನುಮಾನ ಹುಟ್ಟು ಹಾಕಿದೆ. ತಕ್ಷಣವೇ ಎಚ್ಚೆತ್ತ ಮನೆಯ ಮಹಿಳೆ ಪೋನ್ ಮೂಲಕ ಗ್ರಾಮಸ್ಥರಿಗೆ ಸುದ್ದಿ ಮುಟ್ಟಿಸಿದ್ದಾರೆ. ಅಪಾಯದ ಮುನ್ಸೂಚನೆ ಅರಿತ ನಕಲಿ ಕಾವಿಧಾರಿಗಳು ಪರಾರಿಯಾಗಲು ಯತ್ನಿಸಿ ಕಾರು ಸಹಿತ ಸಿಕ್ಕಿಬಿದ್ದಿದ್ದು ಗೂಸಾ ತಿಂದಿದ್ದಾರೆ. ಲಕ್ಷಾಂತರ ನಗದು ಸಹಿತ ಐವರನ್ನು ಬಾಣಾವರ ಠಾಣೆಗೆ ಒಪ್ಪಿಸಿದ್ದಾರೆ.
ಕಾರಿನಲ್ಲಿ ಬಂದಿದ್ದವರು ಕಡೂರು ತಾಲೂಕಿನ ಸಿದ್ದಾಪುರ ಗ್ರಾಮದವರು ಎಂದು ಗೊತ್ತಾಗಿದ್ದು ಪ್ಯಾಂಟ್, ಅಂಗಿ ಬದಲಿಸಿ ಕಾವಿ ಧರಿಸಿ ಭಿಕ್ಷೆ ನೆಪದಲ್ಲಿ ಮನೆಗಳಲ್ಲಿ ದರೋಡೆ ಮಾಡುತ್ತಿದ್ದರು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕಿದ್ದ ಬಾಣಾವರ ಠಾಣೆ ಪೊಲೀಸರು ಐವರನ್ನು ಬಿಟ್ಟು ಕಳುಹಿಸಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ಕಳೆದ ನ.3ರಂದು ಅಪರಿಚಿತರು ಕಲ್ಗುಂಡಿ ಗ್ರಾಮದಲ್ಲಿ ಭಿಕ್ಷೆ ಕೇಳುವ ವೇಳೆ ಮನೆಯವರಿಗೆ ಪಿಸ್ತೂಲ್ ತೋರಿಸಿ ಪರಾರಿಯಾಗಿದ್ದರು. ಇದೀಗ ನಗದು ಸಹಿತ ಆರೋಪಿಗಳು ಸಿಕ್ಕಿ ಬಿದ್ದರೂ ಕ್ರಮ ಜರುಗಿಸದ ಪೊಲೀಸರ ನಡೆ ವಿರುದ್ಧ ಸೋಮಶೆಟ್ಟಿಹಳ್ಳಿ, ಕಲ್ಗುಂಡಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡ್ರೆಸ್ ಕೋಡ್: ಮದಿಂದ ಸಾಮಾನ್ಯ ವೇಷ ಧರಿಸಿ ಕಾರಿನಲ್ಲಿ ಹೊರಡುವ ಖದೀಮರು ಟಾರ್ಗೆಟ್ ಮಾಡಿದ ಹಳ್ಳಿ ಬಳಿ ಕಾವಿ,ರುದ್ರಾಕ್ಷಿ, ವಿಭೂತಿ, ಲಿಂಗದ ಕಾಯಿ ಸೇರಿದಂತೆ ವಿವಿಧ ಪೋಷಾಕು ಧರಿಸಿ ಸ್ವಾಮೀಜಿಯಾಗಿ ಡ್ರೆಸ್ ಕೋಡ್ ಬದಲಿಸಿ ಕಾರ್ಯಾಚರಣೆ ಮಾಡುತ್ತಿದ್ದ ದೂರುಗಳಿವೆ. ಕೃತ್ಯಕ್ಕೆ ಮೂರ್ನಾಲ್ಕು ಸಹಾಯಕರ ನೆರವು ಪಡೆಯುತ್ತಿದ್ದರು ಎನ್ನಲಾಗಿದೆ.
ಅಚ್ಚರಿ: ತಾಲೂಕಿನ ಸುಕ್ಷೇತ್ರ ಯಾದಾಪುರ ಯಾದಾಪುರ ಶ್ರೀ ಜೇನುಕಲ್ ಸಿದ್ದೇಶ್ವರ ಸ್ವಾಮಿ ಮಠದ ಭಕ್ತರು ಎಂದು ನಂಬಿಸಿ ಸುಲಿಗೆ ಮಾಡಿರುವ ನಕಲಿ ಸ್ವಾಮೀಜಿಗಳು ಭವ್ಯ ಮಹಡಿ ಮನೆ, ಐಷಾರಾಮಿ ಕಾರು, ಚಿನ್ನಾಭರಣ, ನಗದು ಹೊಂದಿದ್ದಾರೆ ಎನ್ನುವ ಮಾಹಿತಿ ಗ್ರಾಮಸ್ಥರ ವಿಚಾರಣೆ ವೇಳೆ ಬಹಿರಂಗವಾಗಿದ್ದು ಅಚ್ಚರಿ ಹುಟ್ಟು ಹಾಕಿದೆ. ದೇವರ ಹೆಸರಿನಲ್ಲಿ ನಡೆಯುತ್ತಿರುವ ಹೈಟೆಕ್ ಭಿಕ್ಷೆಗೆ ಕಡಿವಾಣ ಹಾಕಬೇಕು ಎಂದು ಭಕ್ತರು ತಾಲೂಕು ಆಡಳಿತವನ್ನು ಒತ್ತಾಯಿಸಿದ್ದಾರೆ.