ಬಿಎಂಡಬ್ಲ್ಯೂ ಕಾರು ಡಿಕ್ಕಿ; ಬೈಕ್ ಸವಾರರಿಬ್ಬರ ದಾರುಣ ಸಾವು

ಡಿಕ್ಕಿ ರಭಸಕ್ಕೆ ಬೈಕ್ ಸಮೇತ ಚಿಮ್ಮಿ ರಸ್ತೆ ಬದಿ ಗುಂಡಿಗೆ ಬಿದ್ದ ಸವಾರರು| ಬೈಕ್ ನಂತರ ಅಶ್ವಮೇಧ ಬಸ್, ಕಿಯಾ ಸೆಲ್ಟಾಸ್ ಕಾರ್ ಗೂ ಡಿಕ್ಕಿ ಹೊಡೆದ BMW

ಹಾಸನ: ಡಿವೈಡರ್ ದಾಟಿ ಯೂ ಟರ್ನ್ ಮಾಡುತ್ತಿದ್ದ ಪಲ್ಸರ್ ಬೈಕ್‌ಗೆ ಬಿಎಂಡಬ್ಲ್ಯೂ ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ಬೈಕ್ ಸವಾರರು ದಾರುಣವಾಗಿ ಮೃತಪಟ್ಟ ಘಟನೆ ಚನ್ನರಾಯಪಟ್ಟಣ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 75ರ ಕತ್ತರಿಘಟ್ಟ ಬಳಿ ಸಂಭವಿಸಿದೆ.

ಹಾಸನದ ದೇವೇಗೌಡ ನಗರದ ನಿವಾಸಿಗಳಾದ ಅಜಿತ್.ಬಿ.ಎನ್. (30) ಹಾಗೂ ಮನು (31) ಮೃತ ದುರ್ದೈವಿಗಳು. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸಮೇತ ಇಬ್ಬರು ಯುವಕರೂ ಹಳ್ಳಕ್ಕೆ ಹಾರಿ ಬಿದ್ದು ತೀವ್ರವಾಗಿ ಗಾಯಗೊಂಡು ಕೊನೆಯುಸಿರೆಳೆದಿದ್ದಾರೆ.

ಅಪಘಾತ ಎಸಗಿ ರಸ್ತೆ ಬದಿ ಹಳ್ಳಕ್ಕಿಳಿದ BMW

ಬೆಂಗಳೂರಿನಿಂದ ಹಾಸನದ ಕಡೆಗೆ ಬರುತ್ತಿದ್ದ KA-51-MC 2425 ನಂಬರ್‌ನ ಬಿಎಂಡಬ್ಲ್ಯೂ ಕಾರಿಗೆ ಕತ್ತರಿಘಟ್ಟ ಬಳಿ ಡಿವೈಡರ್ ಕ್ರಾಸ್ ಮಾಡುತ್ತಿದ್ದ KA-06 HS-0720 ನಂಬರ್ ನ ಪಲ್ಸರ್ ಬೈಕ್‌ನಲ್ಲಿ ತೆರಳುತ್ತಿದ್ದ ಇಬ್ಬರು ಯುವಕರು ಅಡ್ಡ ಬಂದಿದ್ದಾರೆ.

ಈ ವೇಳೆ ಅತಿ ವೇಗವಾಗಿ ಬರುತ್ತಿದ್ದ ಬಿಎಂಡಬ್ಲ್ಯೂ ಕಾರು ಚಾಲಕನ ನಿಯಂತ್ರಣಕ್ಕೆ ಸಿಗದೆ ಬೈಕ್ ಗೆ ಡಿಕ್ಕಿ ಹೊಡೆದು ನಂತರ ಕಿಯಾ ಕಾರು ಹಾಗೂ KSRTC ಅಶ್ವಮೇಧ ಬಸ್‌ಗೆ ಡಿಕ್ಕಿ ಹೊಡೆದು ಹಳ್ಳಕ್ಕೆ ಇಳಿದಿದೆ.