ಚಿಕ್ಕಮಗಳೂರು: ಅಪಘಾತವಾಗಿದ್ದ ಮಹೀಂದ್ರಾ XUV500 ಕಾರನ್ನು ರಿಪೇರಿಗಾಗಿ ಮಂಗಳೂರಿಗೆ ಟೋಯಿಂಗ್ ವಾಹನ ಬಳಸಿ ಎಳೆದೊಯ್ಯುವಾಗ ಬೆಂಕಿ ಹೊತ್ತಿಕೊಂಡು ಕಾರು ಹೊತ್ತಿ ಉರಿದು ಭಸ್ಮವಾದ ಘಟನೆ ಕಳಸ ಸಮೋಪದ ಸಂಸೆಯ ಬಾಲ್ಗಲ್ ಕಟ್ಟರ್ ನಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಸಂಜೆ ರಸ್ತೆ ಬದಿ ಕಾಟಿಂಗ್ ಮಾಡಿದ್ದ ಸಿಲ್ವರ್ ಮರದ ದಿಮ್ಮಿಗಳಿಗೆ XUV 500 ಡಿಕ್ಕಿ ಹೊಡೆದು ಮುಂಭಾಗ ಜಖಂಗೊಂಡಿತ್ತು. ಆ ಕಾರನ್ನು ರಿಪೇರಿಗಾಗಿ ಮಂಗಳೂರಿಗೆ ಸಾಗಿಸಲು ನಿರ್ಧರಿಸಿದ ಮಾಲೀಕರು ಟೋಯಿಂಗ್ ವಾಹನ ಬಳಸಿ ರಾತ್ರಿ ಕಾರನ್ನು ಎಳೆದೊಯ್ಯಲು ಮುಂದಾದರು.
ಟೋಯಿಂಗ್ ವಾಹನ ಅಪಘಾತ ಸಂಭವಿಸಿದ ಸ್ಥಳದಿಂದ ಕೊಂಚ ಮುಂದಕ್ಕೆ ಕಾರನ್ನು ಎಳೆದೊಯ್ಯುತ್ತಿದ್ದಂತೆ XUV 5OOಗೆ ಬೆಂಕಿ ಹೊತ್ತಿಕೊಂಡು ಉರಿದು ಹೋಯಿತು. ಟೋಯಿಂಗ್ ವಾಹನದ ಚಾಲಕ ತಕ್ಷಣ ವಾಹನ ನಿಲ್ಲಿಸಿ ಆಚೆಗೆ ಬಂದು ನಿಂತು ಅಪಾಯದಿಂದ ಪಾರಾದರು. ಅಲ್ಲದೇ ಬೆಂಕಿ ನಂದಿಸುವ ದಾರಿ ಕಾಣದೆ ಅಸಹಾಯಕರಾಗಿ ನಿಂತರು.
ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದರಿಂದ ಆ ಮಾರ್ಗವಾಗಿ ಸಾಗುತ್ತಿದ್ದ ವಾಹನಗಳನ್ನು ರಸ್ತೆ ಬದಿ ನಿಲ್ಲಿಸಿದ ಚಾಲಕರು ಬೆಂಕಿ ಆರುವವರೆಗೂ ಕಾದು ನಂತರ ಪ್ರಯಾಣ ಮುಂದುವರಿಸಿದರು.