Video; ಹಾಸನ: ಶಾಂತಿಗ್ರಾಮದಲ್ಲಿ ಮುಸುಕುಧಾರಿ ಆಗಂತುಕರ ಓಡಾಟ ಸೃಷ್ಟಿಸಿದ ಆತಂಕ!

ಹಾಸನ, ಏಪ್ರಿಲ್ 15,: ತಾಲೂಕಿನ ಶಾಂತಿಗ್ರಾಮದಲ್ಲಿ ಮನೆಗಳ್ಳತನಕ್ಕೆ ಸಂಬಂಧಿಸಿದ ಆತಂಕಕಾರಿ ಘಟನೆಯೊಂದು ನಡೆದಿದೆ.

ನಿನ್ನೆ ರಾತ್ರಿ 2 ಗಂಟೆ ಸುಮಾರಿಗೆ ಮೂವರು ಮುಸುಕುಧಾರಿಗಳು ಶಾಂತಿಗ್ರಾಮದ ವಾಸದ ಮನೆಗಳ ಬಳಿ ಓಡಾಡಿ, ಮೂರು ಮನೆಗಳಲ್ಲಿ ಕಳ್ಳತನಕ್ಕೆ ಯತ್ನಿಸಿದ್ದಾರೆ.

ಆದರೆ, ಯಾವುದೇ ಮನೆಯಲ್ಲಿ ಕಳ್ಳತನದಲ್ಲಿ ಯಶಸ್ವಿಯಾಗದೆ, ಕಾಂಪೌಂಡ್ ಒಳಗೆ ಪ್ರವೇಶಿಸಿ ವಾಪಸ್ ತೆರಳಿದ್ದಾರೆ. ಈ ಗ್ಯಾಂಗ್ ಮನೆಯ ಮುಂದೆ ನಿಲ್ಲಿಸಿದ್ದ ವಾಹನಗಳನ್ನು ಕಳ್ಳತನ ಮಾಡಲು ಕೂಡ ಯತ್ನಿಸಿದೆ ಎಂದು ತಿಳಿದುಬಂದಿದೆ. ಆದರೆ, ಈ ಯತ್ನವೂ ವಿಫಲವಾಗಿದೆ.

ಕಳ್ಳರ ಓಡಾಟದ ದೃಶ್ಯಗಳು ಸ್ಥಳೀಯ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ, ಇದು ಪೊಲೀಸರ ತನಿಖೆಗೆ ಮಹತ್ವದ ಸಾಕ್ಷ್ಯವಾಗಿದೆ. ಈ ಘಟನೆ ಶಾಂತಿಗ್ರಾಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳೀಯ ಪೊಲೀಸರು ತಕ್ಷಣವೇ ತನಿಖೆ ಆರಂಭಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಕಳ್ಳರ ಗುರುತು ಪತ್ತೆಗೆ ಶ್ರಮಿಸುತ್ತಿದ್ದಾರೆ.

ಜಿಲ್ಲೆಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ಮನೆಗಳ್ಳತನದ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಈ ಘಟನೆ ಸ್ಥಳೀಯರಲ್ಲಿ ಭೀತಿಯನ್ನುಂಟುಮಾಡಿದೆ. ನಿವಾಸಿಗಳು ತಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಹೆಚ್ಚಿನ ಮುಂಜಾಗ್ರತೆ ವಹಿಸುವಂತೆ ಪೊಲೀಸರು ಸೂಚಿಸಿದ್ದಾರೆ.