ಹಾಸನ: ಆಹಾರ ಅರಸಿ ಕಾಡಿನಿಂದ ಬಂದು ರೈತರ ಜಮೀನಿನಲ್ಲಿ ಹಾದು ಹೋಗುತ್ತಿದ್ದಾಗ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಮೂರು ಕರಡಿಗಳು ಪ್ರಾಣಬಿಟ್ಟ ಹೃದಯ ವಿದ್ರಾವಕ ಘಟನೆ ಅರಸೀಕೆರೆ ತಾಲ್ಲೂಕಿನ ಕಲ್ಲುಸಾದರಹಳ್ಳಿ ಗ್ರಾಮದಲ್ಲಿ ಸೋಮವಾರ ಬೆಳಗಿನ ಜಾವ ನಡೆದಿದೆ.
ಆರರಿಂದ ಏಳು ವರ್ಷದ ಒಂದು ಗಂಡು, ಒಂದು ಹೆಣ್ಣು ಹಾಗೂ ಒಂದು ವರ್ಷದ ಮರಿ ಕರಡಿ ವಿದ್ಯುತ್ ಆಘಾತಕ್ಕೆ ಸಿಲುಕಿ ಒದ್ದಾಡಿ ಪ್ರಾಣ ಬಿಟ್ಟಿವೆ.
ಭಾರಿ ಮಳೆ-ಗಾಳಿಗೆ ರೈತರ ಜಮೀನಿನಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು. ಅದೇ ಜಾಗದಲ್ಲಿ ಆಹಾರ ಅರಸಿ ಬರುತ್ತಿದ್ದ ಮೂರು ಕರಡಿಗಳಲ್ಲಿ ಗಂಡು ಕರಡಿ ರೈತರೊಬ್ಬರ ಜಮೀನಿನಲ್ಲಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದಿದೆ. ಅದು ವಿದ್ಯುತ್ ಆಘಾತಕ್ಕೆ ಒಳಗಾಗಿ ಒದ್ದಾಡಿ ಪ್ರಾಣ ಬಿಡುವುದನ್ನು ಕಂಡು ಬೆದರಿದ ಹೆಣ್ಣು ಕರಡಿ ತನ್ನ ಮರಿಯೊಂದಿಗೆ ಓಡಿ ಬಚಾವಾಗಲು ಯತ್ನಿಸಿದೆ.
ದುರ್ದೈವದ ಸಂಗತಿಯೆಂದರೆ ಅವರಸರದ ಓಟದಲ್ಲಿ ಎರಡೂ ಕರಡಿಗಳು ಪಕ್ಕದ ಜಮೀನಿನಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ತುಳಿದು ಒದ್ದಾಡಿ ಪ್ರಾಣ ಬಿಟ್ಟಿವೆ.
ಮಳೆ ಸುರಿದಿದ್ದರಿಂದ ಖುಷಿಯಾದ ರೈತರು ಮುಂಜಾನೆ ಜಮೀನಿನ ಕಡೆಗೆ ಬಂದಿದ್ದಾರೆ. ಆದರೆ ಕರಡಿಗಳು ಮೃತಪಟ್ಟಿರುವುದನ್ನು ದೂರದಿಂದಲೇ ಗಮನಿಸಿದ ಅವರು ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದನ್ನು ಖಚಿತಪಡಿಸಿಕೊಂಡಿದ್ದಾರೆ. ಕರಡಿಗಳ ಶವ ಕಂಡು ಮುನ್ನೆಚ್ಚರಿಕೆ ವಹಿಸಿ ಸೆಸ್ಕ್ ಗೆ ಮಾಹಿತಿ ನೀಡಿದ್ದಾರೆ.
ಒಂದು ವೇಳೆ ಕರಡಿಗಳು ವಿದ್ಯುತ್ ಆಘಾತಕ್ಕೆ ಬಲಿಯಾಗದಿದ್ದರೆ ಬೆಳಗ್ಗೆ ಹೊಲಕ್ಕೆ ಬಂದ ರೈತರು ವಿದ್ಯುತ್ ತಂತಿ ತುಂಡಾಗಿರುವ ವಿಷಯ ತಿಳಿಯದೇ ಪ್ರಾಣ ಕಳೆದುಕೊಳ್ಳುವ ಅಪಾಯವಿತ್ತು. ಈ ಮೂಲಕ ತಮ್ಮ ಪ್ರಾಣ ಕಳೆದುಕೊಂಡ ಕರಡಿಗಳು ಮನುಷ್ಯರ ಪ್ರಾಣ ಉಳಿಸಿವೆ.
ಕರಡಿಗಳು ಸತ್ತುಬಿದ್ದ ವಿಷಯ ತಿಳಿದು ಅಲ್ಲಿಗೆ ಬಂದ ಗ್ರಾಮಸ್ಥರು ಒಂದು ಕರಡಿ ಕುಟುಂಬವೇ ಬಲಿಯಾಗಿದ್ದನ್ನು ಕಂಡು ಮಮ್ಮಲ ಮರುಗಿದರು.
ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು ಕರಡಿಗಳ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಕ್ರಿಯೆ ನೆರವೇರಿಸಿದರು.