ಹಾಸನ: ನಗರದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದ ನೇತೃತ್ವದಲ್ಲಿ ಆಯೋಜಿಸಿರುವ ಹನುಮೋತ್ಸವದ ಬೃಹತ್ ಶೋಭಾಯಾತ್ರೆ ಸಾವಿರಾರು ಜನರು ಉತ್ಸಾಹದಿಂದ ಪಾಲ್ಗೊಂಡಿದ್ದಾರೆ.
ನಗರದ ನೀರುವಾಗಿಲು ಆಂಜನೇಯಸ್ವಾಮಿ ದೇವಾಲಯದಿಂದ ಪ್ರಾರಂಭವಾದ ಶೋಭಾಯಾತ್ರೆ ಭಕ್ತರ ಉತ್ಸಾಹದ ನಡುವೆ ಪ್ರಮುಖ ರಸ್ತೆಗಳಲ್ಲಿ ಸಾಗುತ್ತಿದೆ.
ಸಾವಿರಾರು ಭಕ್ತರು ಭಾಗಿ:
ಹನುಮೋತ್ಸವ ಶೋಭಾಯಾತ್ರೆಯಲ್ಲಿ ಸಾವಿರಾರು ಭಕ್ತರು ಭಾಗಿಗಳಾಗಿದ್ದು, ಹನುಮನ ಭಜನೆ, ಕವಡೆ ಕಲೆ, ತಮಟೆ ಮತ್ತು ಡೊಳ್ಳುಗಳ ನಾದದಲ್ಲಿ ನಗರದ ರಸ್ತೆಗಳಲ್ಲಿ ರಾಮನಾಮ, ಹನುಮ ಜೈಕಾರಗಳು ಪ್ರತಿಧ್ವನಿಸಿದವು.
ನಾಯಕರನ್ನು ಹೊತ್ತು ಕುಣಿದ ಬೆಂಬಲಿಗರು:
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಶಾಸಕ ಪ್ರೀತಂಗೌಡ, ರಾಜ್ಯ ಬಿಜೆಪಿ ಎಸ್ ಸಿ ಮೋರ್ಚಾ ಅಧ್ಯಕ್ಷ, ಶಾಸಕ ಸಿಮೆಂಟ್ ಮಂಜು ಶೋಭಾಯಾತ್ರೆಯಲ್ಲಿ ಭಾಗಿಯಾಗಿ ಡಿಜೆ ಶಬ್ದಕ್ಕೆ ಕುಣಿಯುವ ಮೂಲಕ ಭಕ್ತರಲ್ಲಿ ಹೊಸ ಹುಮ್ಮಸ್ಸು ತಂದಿದ್ದಾರೆ. ಅವರ ಬೆಂಬಲಿಗರು ಸಹ ಮುಖಂಡರನ್ನು ಹೊತ್ತು ಕುಣಿದರು.
ಬಿಗಿ ಪೊಲೀಸ್ ಬಂದೋಬಸ್ತ್,:
ಕಾರ್ಯಕ್ರಮ ಶಾಂತಿ, ಸೌಹಾರ್ದತೆಯೊಂದಿಗೆ ನೆರವೇರಲು ಹಾಸನ ಪೊಲೀಸರ ಬಿಗಿ ಬಂದೋಬಸ್ತ್ ವ್ಯವಸ್ಥೆ ಇದೆ. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಿಲ್ಲದಂತೆ ನಿಗಾ ವಹಿಸಲಾಗಿದೆ. ಪ್ರಮುಖ ಅಧಿಕಾರಿಗಳು ಸ್ಥಳದಲ್ಲಿದ್ದು ಭದ್ರತೆಯ ಉಸ್ತುವಾರಿ ನಿಭಾಯಿಸುತ್ತಿದ್ದಾರೆ.