ಹಾಸನ: ಈ ಬಾರಿಯ ಹಾಸನಾಂಬೆ ಜಾತ್ರಾ ಮಹೋತ್ಸವವನ್ನು ಕಳೆದ ಬಾರಿಗಿಂತಲೂ ಅದ್ಧೂರಿ-ವಿಜೃಂಭಣೆಯಿಂದ ನಡೆಸಲು ನಿರ್ಧರಿಸಲಾಗಿದ್ದು, ಹೂವಿನ ಅಲಂಕಾರಕ್ಕೆ ಲಾಲ್‌ಬಾಗ್ ತಂತ್ರಜ್ಞರು ಹಾಗೂ ವಿದ್ಯುತ್ ಅಲಂಕಾರಕ್ಕೆ ಮೈಸೂರು ದಸರಾ ವೇಳೆ ಅಲಂಕಾರ ಮಾಡುವವರ ನೆರವು ಪಡೆಯಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.
ಜಿಪಂ ಸಭಾಂಗಣದಲ್ಲಿಂದು ಈ ಬಾರಿಯ ಹಾಸನಾಂಬೆ ಜಾತ್ರೋತ್ಸವದ ಆ್ಯಪ್ ಮತ್ತು ಪೋಸ್ಟರ್ ಬಿಡುಗಡೆ ಮಾಡಿ ನಂತರ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು.
ಹಾಸನಾಂಬೆ ಉತ್ಸವಕ್ಕೆ ಮೆರುಗು ನೀಡಲು ಹೊರಗಿನ ತಂತ್ರಜ್ಞರನ್ನು ಕರೆಸಲಾಗುತ್ತಿದೆ. ಈ ಬಾರಿ ಸಿದ್ದೇಶ್ವರ ದೇವಾಲಯ ಒಳಗೂ ಅಲಂಕಾರ ಆಗಬೇಕು. ಈ ಸಲ ವಿಶೇಷವಾಗಿ ಫಲಪುಷ್ಪ ಪ್ರದರ್ಶನ ಇರಲಿದೆ ಎಂದರು.
ಕಳೆದ ಬಾರಿ ಆಗಿದ್ದ ಸಣ್ಣಪುಟ್ಟ ಲೋಪದೋಷ ಮರುಕಳಿಸದಂತೆ ಎಲ್ಲಾ ಅಧಿಕಾರಿಗಳು ಎಚ್ಚರ ವಹಿಸಬೇಕು. ಈ ವರ್ಷ ದರ್ಶನ ಅವಧಿ ಕಡಿಮೆ ಇದೆ. ಆದರೂ ಹೆಚ್ಚು ಭಕ್ತರು ಬರಬಹುದು. ಅದಕ್ಕಾಗಿ ಸಿದ್ಧತೆ ಮಾಡಿಕೊಳ್ಳಿ ಎಂದರು.
ಶಾಸಕರು, ಸಂಸದರು, ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಸೇರಿ ನಗರದಲ್ಲಿ ಎರಡು ದಿನ ಸ್ವಚ್ಛತಾ ದಿನಾಚರಣೆ ಮಾಡಿ, ರೋಗ ತಡೆಗೆ ಎಲ್ಲಾ ಮುಂಜಾಗ್ರತೆ ವಹಿಸಿ ಎಂದು ಸಲಹೆ ನೀಡಿದರು.
ವೈದ್ಯಕೀಯ ಚಿಕಿತ್ಸೆಗಾಗಿ ಪ್ರತ್ಯೇಕ ತುರ್ತು ವ್ಯವಸ್ಥೆ ಮಾಡಿಕೊಳ್ಳಿ ಎಂದು ಡಿಹೆಚ್‌ಒಗೆ ಸೂಚಿಸಿದರು. ಹಾಗೆಯೇ ಪೊಲೀಸ್ ಬಂದೋಬಸ್ತ್ ಗೆ ಸೂಚಿಸಿದರು.
ಮೈಸೂರು ದಸರಾದಲ್ಲಿರುವಂತೆ ಡಬ್ಬಲ್ ಡೆಕ್ಕರ್ ಬಸ್‌ಗಳನ್ನು ಸಾಧ್ಯವಾದ್ರೆ ಇಲ್ಲಿಗೂ ಕರೆಸಿ ಪ್ರವಾಸಿ ಸ್ಥಳಗಳಿಗೆ ಕಳಿಸೋಣ
ಎಂದರು.
ಈ ಬಾರಿ ಭಕ್ತರಿಗೆ ಯಾವುದೇ ಸಮಸ್ಯೆ, ಕಿರಿಕಿರಿ ಆಗಬಾರದು. ಬಂದು ಹೋದವರಲ್ಲಿ ಸಂತೃಪ್ತ ಭಾವನೆ ಬರಬೇಕು. ಈ ಬಾರಿ
2೦ ಲಕ್ಷ ಜನ ಬರಬಹುದು. ಮುಜುಗರ ಆಗದ ರೀತಿ ದರ್ಶನ ಸಿಗಬೇಕು ಎಂದರು.
ಹಣ ಎಷ್ಟೇ ಖರ್ಚಾಗಲಿ, ವ್ಯವಸ್ಥೆ, ಪ್ರಸಾದ ಗುಣಮಟ್ಟದಲ್ಲಿ ಅಚ್ಚುಕಟ್ಟುತನ ಇರಬೇಕು, ಭಕ್ತರಿಗೆ ಒಳಿತು ಮಾಡಲು ತಯಾರಾಗಿ, ಇದರಿಂದ ಹಾಸನಕ್ಕೆ ಹೆಸರು ಬರಬೇಕು ಎಂದು ಸಚಿವರು ಅಧಿಕಾರಿಗಳಿಗೆ ತಿಳಿಸಿದರು. ಮಾಧ್ಯಮಗಳಿಂದಲೂ ಸಹಕಾರ ಸಿಗಬೇಕು. ಹೆಚ್ಚು ಪ್ರಚಾರ ನೀಡಿದರೆ ಹೆಚ್ಚು ಭಕ್ತರು ಬರುತ್ತಾರೆ ಎಂದರು. ಅಧಿಕಾರಿಗಳು ನಮಗೆ ಜವಾಬ್ದಾರಿ ಇಲ್ಲ ಅಂದುಕೊಳ್ಳ ಬಾರದು ಮನೆಯ ದೇವತಾಕಾರ್ಯ ಎಂದುಕೊಂಡು ಉತ್ಸವದಲ್ಲಿ ಸಕ್ರಿಯವಾಗಿ ತೊಡಸಿಕೊಳ್ಳಿ ಎಂದು ತಾಕೀತು ಮಾಡಿದರು.
ಹಾಸನಾಂಬೆ ದೇವಾಲಯದ ಗರ್ಭಗುಡಿ ಬಾಗಿಲು, ಅ.೨೪ ರಂದು ಮಧ್ಯಾಹ್ನ ೧೨ ಗಂಟೆಗೆ ತೆರೆಯಲಿದೆ. ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ತುಮಕೂರಿನ ಸಿದ್ಧಗಂಗಾ ಶ್ರೀ ಆಗಮಿಸಲಿದ್ದಾರೆ. ಅದಾದ ಬಳಿಕ ೨೪ ಗಂಟೆ ದರ್ಶನ ಇರಲಿದೆ ಎಂದರು.
ಇದಕ್ಕೂ ಮುನ್ನ ನಡೆದ ಪೂರ್ವಭಾವಿ ಸಭೆಯಲ್ಲಿ ಎಸಿ ಹಾಗೂ ಹಾಸನಾಂಬೆ ದೇವಾಲಯದ ಆಡಳಿತಾಧಿಕಾರಿ ಮಾರುತಿ ಉತ್ಸವದ ಪೂರ್ವ ಸಿದ್ಧತೆ ಬಗ್ಗೆ ವಿವರಿಸಿದರು.
ಮುಂದಿನ ವಾರದಿಂದ ಆಹ್ವಾನ ಪತ್ರಿಕೆ ಹಂಚಿಕೆ, ಎಂದಿನಂತೆ ಎಲ್‌ಇಡಿ ಪರದೆ ಅಳವಡಿಕೆ, 84 ಶೌಚಾಲಯ ನಿರ್ಮಾಣ, ಯುಜಿ ಕೇಬಲ್ ಅಳವಡಿಕೆ, ಕುಡಿಯುವ ನೀರು, ತಿಳಿ ಮಜ್ಜಿಗೆ ನೀಡಿಕೆ, ಪ್ರಚಾರ ಫ್ಲೆಕ್ಸ್ ಮತ್ತು ಸೂಚನಾ ಫಲಕ ಅಳವಡಿಕೆ, ಸರ್ಕಾರಿ ಕಚೇರಿಗಳಿಗೆ ಲೈಟಿಂಗ್ಸ್ ಅಲಂಕಾರ ಬಗ್ಗೆ ವಿವಿಧ ಇಲಾಖೆಗಳಿಗೆ ಜವಾಬ್ದಾರಿ ನೀಡಲಾಗಿದೆ ಎಂದು ವಿವರಿಸಿದರು.
ಡಿಸಿ ಸತ್ಯಭಾಮ ಅವರು ಕಳೆದ ಬಾರಿ ಇದ್ದ ಎಲ್ಲಾ ವ್ಯವಸ್ಥೆ, ಸೌಲಭ್ಯ ಆಗಸದಲ್ಲಿ ಹಾಸನ, ಪ್ರವಾಸಿ ಟೂರ್ ಮೊದಲಾದವು ಈ ಬಾರಿಯೂ ಇರಲಿವೆ ಎಂದರು.
ಇದೇ ವೇಳೆ ಉತ್ತಮ ಕಂದಾಯ ಅಧಿಕಾರಿ ಪ್ರಶಸ್ತಿಗೆ ಭಾಜರಾದ ಡಿಸಿ ಸಿ.ಸತ್ಯಭಾಮ, ಎಸಿ ಮಾರುತಿ, ತಹಸೀಲ್ದಾರ್‌ಗಳಾದ ಶ್ವೇತಾ, ಕೃಷ್ಣಮೂರ್ತಿ ಅವರನ್ನು ಸಚಿವರು, ಶಾಸಕರು, ಸಂಸದರು ಅಭಿನಂದಿಸಿ ಶುಭ ಹಾರೈಸಿದರು.
ಸಭೆಯಲ್ಲಿ ಶಾಸಕರಾದ ಕೆ.ಎಂ.ಶಿವಲಿಂಗೇಗೌಡ, ಹೆಚ್.ಪಿ.ಸ್ವರೂಪ್ ಪ್ರಕಾಶ್, ನಗರಸಭೆ ಅಧ್ಯಕ್ಷ ಎಂ.ಚಂದ್ರೇಗೌಡ, ಎಸ್ಪಿ ಮೊಹಮದ್ ಸುಜೀತಾ, ಜಿಪಂ ಸಿಇಒ ಪೂರ್ಣಿಮಾ ಮೊದಲಾದವರಿದ್ದರು.
ಹಾಸನಾಂಬೆ ಅರ್ಚಕರು ಅಧಿಕಾರಿಗಳು ಹೇಳಿದಂತೆ ಕೇಳಬೇಕು. ಪೂಜೆ, ನೈವೇದ್ಯ ಇತ್ಯಾದಿ ಕಾರಣ ನೀಡಿ ದರ್ಶನಕ್ಕೆ ಅನಗತ್ಯ ವಿಳಂಬ ಮಾಡಬಾರದು, ಪೂಜಾ ಸಮಯ ಕಡಿಮೆ ಮಾಡಿ, ಇದರಿಂದ ಭಕ್ತರಿಗೆ ಅನುಕೂಲ ಆಗಲಿದೆ.
-ಕೆ.ಎನ್.ರಾಜಣ್ಣ