ಹಾಸನಾಂಬೆಗೆ ದಾಖಲೆ ಕಾಣಿಕೆ; ಜಾತ್ರಾ ಮಹೋತ್ಸವದ ಇತಿಹಾಸದಲ್ಲೇ ಅತ್ಯಧಿಕ ಆದಾಯ ೮.೭೨ ಕೋಟಿ ರೂ.! ಸಂಗ್ರಹ

ಹಾಸನಾಂಬೆ ಹುಂಡಿ ಹಣ ಎಣಿಕೆ ಮಾಡಿದ ಬ್ಯಾಂಕ್‌ ಅಧಿಕಾರಿಗಳು ಹಾಗೂ ಸ್ವಯಂ ಸೇವಕರು

ಹಾಸನ: ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆ ಜಾತ್ರಾ ಮಹೋತ್ಸವಕ್ಕೆ ನಿನ್ನೆಯೇ ತೆರೆಬಿದ್ದಿದೆ. ಇಂದು ನಡೆದ ಹುಂಡಿ ಎಣಿಕೆಯಲ್ಲಿ ಭಕ್ತರು ಹರಕೆ ರೂಪದಲ್ಲಿ ನೀಡಿದ್ದ ಕಾಣಿಕೆ ಹೊಸ ದಾಖಲೆ ಬರೆದಿದೆ. ಇಂದು ಬೆಳಗ್ಗೆಯಿಂದ ನಡೆದ ಎಣಿಕೆ ಕಾರ್ಯ ನಂತರ ಹಾಸನಾಂಬೆ ಉತ್ಸವದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ದಾಖಲೆಯ ಆದಾಯ ಹರಿದುಬಂದಿದೆ.
ಟಿಕೆಟ್, ಲಾಡುಪ್ರಸಾದ ಹಾಗೂ ಹುಂಡಿ ಎಣಿಕೆಯಿಂದ ಬರೋಬ್ಬರಿ ೮.೭೨ ಕೋಟಿ ಆದಾಯ ಬಂದಿದೆ.


ಶಕ್ತಿದೇವತೆ, ಹಾಸನದ ಅಧಿದೇವತೆ, ವರ್ಷಕ್ಕೊಮ್ಮೆ ದರ್ಶನ ನೀಡೋ ಹಾಸನಾಂಬೆ ಜಾತ್ರಾ ಮಹೋತ್ಸವಕ್ಕೆ ನಿನ್ನೆಯಷ್ಟೇ ತೆರೆಬಿದ್ದಿದೆ. ನವೆಂಬರ್ ೦೨ ರಿಂದ ೧೫ ರ ವರೆಗೆ ನಡೆದ ಜಾತ್ರಾ ಮಹೋತ್ಸವದಲ್ಲಿ ೧೪.೨೦ ಲಕ್ಷ ಜನರು ತಾಯಿಯ ದರ್ಶನ ಪಡೆದುಕೊಂಡು ಹೋಗಿದ್ದಾರೆ.
ದೇವಿಯ ದರ್ಶನ ಪಡೆದು ಅನುಗ್ರಹ ಪಡೆದ ಭಕ್ತರು ಹರಕೆ ರೂಪದಲ್ಲಿ ಹುಂಡಿಗೆ ಹಾಕಿದ್ದ ಹಣನ್ನ ಇಂದು ಎಣಿಕೆ ಮಾಡಲಾಯಿತು. ಸಿದ್ದೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಹಾಸನಾಂಬ ಆಡಳಿತಾಧಿಕಾರಿ ಹಾಗೂ ಹಾಸನ ಉಪ ವಿಭಾಗಾಧಿಕಾರಿ ಮಾರುತಿ ಅವರ ನೇತೃತ್ವದಲ್ಲಿ ಕಂದಾಯ ಇಲಾಖೆ ಹಾಗೂ ಸ್ಕೌಟ್ಸ್ ಗೈಡ್ಸ್ ಮಕ್ಕಳು ಸೇರಿದಂತೆ ಹಲವರಿಂದ ಬೆಳಗ್ಗೆಯಿಂದ ಸಂಜೆವರೆಗೂ ಹುಂಡಿ ಹಣ ಎಣಿಕೆ ಮಾಡಲಾಯಿತು. ಇದರಿಂದ ೨.೫ ಕೋಟಿ ಹಣ ಹುಂಡಿಯಿಂದ ಸಂಗ್ರಹವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ೨೦ ಲಕ್ಷ ಹಣ ಇ-ಹುಂಡಿಯಿAದ ಹರಿದು ಬಂದಿದೆ. ತಾಯಿಯ ದರ್ಶನಕ್ಕೆ ಬಂದ ಭಕ್ತರಿಗೆ ಜಿಲ್ಲಾಡಳಿತ ಎಲ್ಲಾ ರೀತಿಯ ವ್ಯವಸ್ಥೆ ಮಾಡಿ, ಯಶಸ್ವಿಯಾಗಿ ಜಾತ್ರಾ ಮಹೋತ್ಸವ ಮುಗಿಸಿದೆ. ಇಂದು ಹುಂಡಿ ಎಣಿಕೆ ಕಾರ್ಯವೂ ಮುಗಿದಿದ್ದು, ಈ ಬಾರಿ ದುಪ್ಪಟ್ಟು ಆದಾಯ ಜಾಸ್ತಿಯಾಗಿದೆ ಎಂದು ಆಡಳಿತಾಧಿಕಾರಿ ಮಾಹಿತಿ ನೀಡಿದ್ದಾರೆ.
ಹಾಸನಾಂಬೆ ದರ್ಶನಕ್ಕೆ ನಿಗದಿ ಪಡಿಸಿದ್ದ ಒಂದು ಸಾವಿರ ರೂ. ಮತ್ತು ಮುನ್ನೂರು ರೂಪಾಯಿ ಟಿಕೆಟ್ ಹಾಗೂ ಲಾಡು ಪ್ರಸಾದ ಮಾರಾಟದಿಂದ ಬರೋಬ್ಬರಿ ೬.೧೫ ಕೋಟಿ ಆದಾಯ ಬಂದಿದೆ.
೧೦೦೦ ರೂಪಾಯಿ ಟಿಕೆಟ್ ನಿಂದ ೩.೦೯ ಕೋಟಿ ಬಂದಿದ್ದರೆ, ೩೦೦ ರೂಪಾಯಿ ಟಿಕೆಟ್ ನಿಂದ ೨.೩೫ ಕೋಟಿ ಹಾಗೂ ಲಾಡು ಪ್ರಸಾದದಿಂದ ೭೦.೨೩ ಲಕ್ಷ ಆದಾಯ ಬಂದಿದೆ.
ಹುಂಡಿ ಸೇರಿದಂತೆ ಎಲ್ಲಾ ಮೂಲಗಳಿಂದ ಈ ಬಾರಿ ದೇವಾಲಯಕ್ಕೆ ಬರೋಬ್ಬರಿ ೮.೭೨ ಕೋಟಿ ಆದಾಯ ಹರಿದುಬಂದಿದೆ.
ದೇವಾಲಯ ಮುಜರಾಯಿ ಇಲಾಖೆಗೆ ಸೇರುವುದರಿಂದ ಈ ಎಲ್ಲಾ ಹಣವನ್ನ ದೇವಾಲಯದ ಖಾತೆಗೆ ವರ್ಗಾಯಿಸಲಾಗುತ್ತದೆ ಹಾಗೂ ಈ ಹಣದಿಂದ ದೇವಾಲಯವನ್ನು ಅಭಿವೃದ್ಧಿಗೊಳಿಸಲಾಗುತ್ತದೆ ಎಂದು ಹಾಸನಾಂಬ ಆಡಳಿತಾಧಿಕಾರಿ ಹಾಗೂ ಹಾಸನ ಎಸಿ ಮಾರುತಿ ಮಾಹಿತಿ ನೀಡಿದರು.


ಒಟ್ಟಿನಲ್ಲಿ ೧೫ ದಿನಗಳ ಕಾಲ ನಡೆದ ಹಾಸನಾಂಬ ಜಾತ್ರಾ ಮಹೋತ್ಸವಕ್ಕೆ ನಿನ್ನೆ ವಿಧ್ಯುಕ್ತ ತೆರೆಬಿದ್ದಿದ್ದು,  ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಕೋಟಿ ಕೋಟಿ ಆದಾಯ ಹರಿದುಬಂದಿದೆ.
ಕಳೆದ ಜಾತ್ರಾ ಮಹೋತ್ಸವಗಳಿಗೆ ಹೋಲಿಕೆ ಮಾಡಿದ್ರೆ ದುಪ್ಪಟ್ಟು ಪ್ರಮಾಣದಲ್ಲಿ ಏರಿಕೆಯಾಗಿದೆ. ದೇವರ ಹೆಸರಿನಲ್ಲಿ ಬಂದಿರೋ ಕೋಟಿ ಕೋಟಿ ಹಣ ಒಳ್ಳೇ ಕಾರ್ಯಕ್ಕೆ ಬಳಕೆ ಆಗಲಿ ಎಂಬುದು ಸರ್ವ ಭಕ್ತರ ಆಶಯವಾಗಿದೆ.