ಸಕಲೇಶಪುರ: ಅರ್ಧ ಶತಮಾನದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಜೀವನದಿ ಹೇಮಾವತಿ ತನ್ನ ಹರಿವನ್ನು ನಿಲ್ಲಿಸಿದೆ.
ಮೂಡಿಗೆರೆ ತಾಲೂಕಿನ ಜಾವಳಿ ಗ್ರಾಮದಲ್ಲಿ ಹುಟ್ಟಿ 245 ಕಿ.ಮೀ ದೂರ ಹರಿದು ಕೆ.ಆರ್. ಪೇಟೆ ತಾಲೂಕಿನ ಅಂಬಿಗರಹಳ್ಳಿ ಗ್ರಾಮ ಸಮೀಪ ಕಾವೇರಿ ನದಿ ಸೇರುವ ಹೇಮಾವತಿ ಕಾವೇರಿ ನದಿಯ ಪ್ರಮುಖ ಉಪನದಿ ಪಾತ್ರ ಈಗ ಅಲ್ಲಲ್ಲಿ ನಿಂತ ನೀರಿನ ಹೊಂಡಂತೆ ಕಾಣುತ್ತಿದೆ.
ಜಾವಳಿ ಗ್ರಾಮದ ಕಾಫಿ ತೋಟದಲ್ಲಿ ಹುಟ್ಟುವ ಹೇಮಾವತಿ ನದಿ ಪಟ್ಟಣ ಸಮೀಪಿಸುವ ವೇಳೆಗೆ ಜಪವತಿ ಸೇರಿದಂತೆ 10 ಕ್ಕೂ ಅಧಿಕ ಉಪನದಿಗಳ ಸಂಗಮವಾಗುತ್ತದೆ.
ಆದರೆ, ಕಳೆದ ಬಾರಿಯ ವಾಡಿಕೆ ಮಳೆಯ ಕೊರತೆ, ಈ ಬಾರಿಯ ಅಧಿಕ ಉಷ್ಣಾಂಶ ಪಶ್ಚಿಮಘಟ್ಟದಿಂದ ಹುಟ್ಟಿ ಹರಿಯುವ ಉಪನದಿಗಳ ಜಲಮೂಲವನ್ನು ಬತ್ತಿಸಿವೆ.
ಇತಿಹಾಸದಲ್ಲಿ ಇದೇ ಮೊದಲು:
ಹೇಮಾವತಿ ನದಿ ಸಂಪೂರ್ಣ ಹರಿವು ನಿಲುಗಡೆಯಾಗಿರುವುದು ಇದೇ ಮೊದಲಾಗಿದ್ದು, ಅರ್ಧ ಶತಮಾನದ ಅವಧಿಯಲ್ಲಿ ಏಳು ಬಾರಿಮಲೆನಾಡಿನಲ್ಲಿ ಬರಗಾಲದ ಸ್ಥಿತಿ ಎದುರಾಗಿದೆ.
1974, 1978, 1986, 1998, 2003-04 ಹಾಗೂ 2017ರಲ್ಲಿ ಮಳೆ ಕೊರತೆಯಾದರೂ ಹೇಮಾವತಿ ನದಿಯ ಹರಿವು ನಿಲುಗಡೆಯಾಗಿರಲಿಲ್ಲ. ಈಗ ಕೇವಲ ಪಟ್ಟಣಕ್ಕೆ ನೀರು ಪೊರೈಸುವ ಚೆಕ್ ಡ್ಯಾಂವರೆಗೆ ಅಲ್ಪಪ್ರಮಾಣ ದಲ್ಲಿ ನೀರಿನ ಹರಿವಿದೆ.
ಅಧಿಕಾರಿಗಳ ಸಾಹಸ:
ತಾಲೂಕಿನ ಹೆನ್ನಲಿ ಗ್ರಾಮ ಸಮೀಪ ಪಟ್ಟಣಕ್ಕೆ ನೀರು ಪೊರೈಸಲು ಚೆಕ್ ಡ್ಯಾಂ ನಿರ್ಮಾಣಮಾಡಲಾಗಿದೆ. ಆದರೆ, ಡ್ಯಾಂನಲ್ಲಿ ಕೇವಲ ಮೂರರಿಂದ ನಾಲ್ಕು ಅಡಿಗಳಷ್ಟು ನೀರಿನ ಸಂಗ್ರಹ ವಿದ್ದು ಮೋಟರ್‌ಗಳಿಗೆ ನೀರು ಎಟಕುತ್ತಿಲ್ಲ.
ಇದರಿಂದಾಗಿ ಕಳೆದ ಎರಡು ದಿನಗಳಿಂದ ಪುರಸಭೆ ಅಧಿಕಾರಿಗಳು ಪಟ್ಟಣಕ್ಕೆ ನೀರು ಪೊರೈಕೆಗಾಗಿ ಕಸರತ್ತು ಮಾಡುತ್ತಿದ್ದು ಬಾವಿಯಲ್ಲಿ ಸಂಗ್ರಹವಾಗಿರುವ ನೀರನ್ನು ಮೋಟರ್‌ನಿಂದ ನದಿ ಸಮೀಪದ ಮತ್ತೊಂದು ಬಾವಿಗೆ ತುಂಬಿಸಿ ಅಲ್ಲಿಂದ ಓವರ್ ಹೆಡ್ ಟ್ಯಾಂಕ್ ಗೆ ನೀರು ಪೊರೈಸಲಾಗುತ್ತಿದೆ. ನೀರಿನ ಹರಿವು ಕ್ಷೀಣವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹೇಮೆ ವಿಶೇಷ:
ಉತ್ತರ ಭಾರತದ ಗಂಗಾನದಿಯನ್ನು ಹೊರತುಪಡಿಸಿದರೆ ದೋಣಿ ವಿಹಾರಕ್ಕೆಯೋಗ್ಯವಾಗಿ ರುವ ನದಿ ಎಂದರೆ ಹೇಮಾವತಿ ಎಂಬ ಮಾತಿದ್ದು ಹುಟ್ಟಿದ ಪ್ರದೇಶದಿಂದ ಸೇರುವ ಸ್ಥಳದವರೆಗೂ ಎಲ್ಲಿಯೂ ಒಂದಡಿಯೂ ಜಿಗಿಯದ ಈ ನದಿಯ ಹರಿವು ನಿಗೂಢ.
ಮೇನಲ್ಲಿ ನಿಂತಿರುವಂತೆ ಕಂಡರೂ ಒಳ ಹರಿವಿನ ವೇಗ ಗುಪ್ತಗಾಮಿನಿಯಾಗಿರುವುದು ಇದರ ವಿಶೇಷ. ಮೇಲ್ಮೈನಲ್ಲಿ ನೀರು ನಿಧಾನಗತಿ ಯಲ್ಲಿ ಹರಿಯುವುದರಿಂದ ಈ ನದಿಯನ್ನು ಮೂಡಿಗೆರೆ ಹಾಗೂ ಸಕಲೇಶಪುರ ತಾಲೂಕಿನ ಗ್ರಾಮೀಣ ಭಾಗದಲ್ಲಿ ಜನರು ಎಣ್ಣೆಹೊಳೆ ಎಂದು ಕರೆಯುತ್ತಾರೆ.
ಪ್ರತೀತಿ: ಹೇಮಾವತಿ ನದಿ ಹಾಗೂ ಎತ್ತಿನಹಳ್ಳ ಅಕ್ಕ-ತಂಗಿಯರು ಎಂಬ ಪ್ರತೀತಿ ಇದ್ದು ಎರಡು ನದಿಗಳು ಒಂದೆಡೆ ತಂಗಿದ್ದ ವೇಳೆ ಎತ್ತಿನಹಳ್ಳ ನಿದ್ರೆಗೆ ಜಾರಿತ್ತು. ಈ ವೇಳೆ ಎಚ್ಚೆತ್ತ ಹೇಮಾವತಿ ನದಿ ನಿಧಾನವಾಗಿ ಪೂರ್ವಾಭಿಮುಖವಾಗಿ ಹರಿಯಲಾರಂಭಿಸಿತ್ತು. ಎಚ್ಚೆತ್ತ ಎತ್ತಿನಹಳ್ಳ ಪಶ್ಚಿಮಾಭಿಮುಖವಾಗಿ ಹರಿಯ ಲಾರಂಭಿಸಿತ್ತು. ಅಂದಿನಿಂದ ಈ ಎರಡು ನದಿಗಳು ಸಂಗಮಿಸಿಲ್ಲ ಎಂಬ ಕಥೆ ಮಲೆನಾಡಿನಲ್ಲಿದೆ.
ಚೆಕ್ ಡ್ಯಾಂನಲ್ಲಿ ನೀರಿನ ಸಂಗ್ರಹ ಕ್ಷೀಣವಾಗಿರುವುದ ರಿಂದ ನದಿಯ ಮಧ್ಯ ಭಾಗಲ್ಲಿರುವ ಬಾವಿಗೆ ಮೋಟರ್ ಇಟ್ಟು ನೀರೆತ್ತಲಾಗುತ್ತಿದೆ. ಮುಂದೆ ಮಳೆಯಾಗದಿದ್ದರೆ ನೀರು ಪೂರೈಕೆ ಕಷ್ಟವಾಗಲಿದೆ.
• ರಮೇಶ್, ಮುಖ್ಯಾಧಿಕಾರಿ, ಪುರಸಭೆ.
ಇದೇ ಮೊದಲ ಬಾರಿಗೆ ಹೇಮಾ ವತಿ ನದಿ ಒಡಲು ಸಂಪೂರ್ಣ ಖಾಲಿಯಾಗಿರುವುದು ದುರದೃಷ್ಟಕರ. ಇದರಿಂದ ಭಾರಿ ಪ್ರಮಾಣದಲ್ಲಿ ಜಲಚರಗಳು ನಾಶವಾಗುತ್ತಿವೆ ಎನ್ನುವುದು ಆತಂಕಕಾರಿ.
• ಬನ್ನಹಳ್ಳಿ ಪುನೀತ್, ಅರೆಕೆರೆ ಗ್ರಾಮ, ಉದ್ಯಮಿ