ಬಾಳ್ಳುಪೇಟೆ ಗ್ರಾಮದೇವತೆ ದೇವೀರಮ್ಮ ದೇವಾಲಯದಲ್ಲಿ ಕಳವು

ಸಕಲೇಶಪುರ: ಕಳೆದ ರಾತ್ರಿ  ತಾಲೂಕಿನ  ಬಾಳ್ಳುಪೇಟೆ ಗ್ರಾಮ ದೇವತೆ ಶ್ರೀ ದೇವಿರಮ್ಮ ದೇವಸ್ಥಾನದ ಬಾಗಿಲು ಬೀಗ ಮುರಿದು ಒಳ ನುಗ್ಗಿರುವ ಕಳ್ಳರು ದೇವರ ಮುಖವಾಡ ಸೇರಿದಂತೆ  ಹಲವು ವಸ್ತುಗಳನ್ನು  ಕಳವು ಮಾಡಿದ್ದಾರೆ.

ಬಾಳ್ಳುಪೇಟೆ ಸುತ್ತಮುತ್ತಲಿನ ಹತ್ತೂರುಗಳ ಗ್ರಾಮ ದೇವತೆಯಾಗಿರುವ ದೇವೀರಮ್ಮ ದೇವಾಲಯದಲ್ಲಿ ವಾರ್ಷಿಕ ಸುಗ್ಗಿ ನಂತರ ದೇವಿ ಮುಖವಾಡಗಳನ್ನು ದೇವಾಲಯದ ಗರ್ಭಗುಡಿಯೊಳಗೆ ಇರಿಸಲಾಗುತ್ತದೆ.

ಕಳ್ಳರು ಆ ಮುಖವಾಡಗಳನ್ನೇ ಹೊತ್ತೊಯ್ದಿದ್ದಾರೆ ಎನ್ನಲಾಗಿದೆ. ಯಡೇಹಳ್ಳಿ ಹೆಗ್ಗಡತಿ ಕಾಲದಲ್ಲಿ ದೇವರ ಮುಖವಾಡಗಳನ್ನು ಕೆರೆಗೆ ಎಸೆದಾಗ ದೇವಿ ಪವಾಡ ತೋರಿದ ಬಗ್ಗೆ ಧಾರ್ಮಿಕ ನಂಬಿಕೆ ಬಲವಾಗಿದೆ.

ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇರುವ ದೇವಾಲಯದಲ್ಲಿ ಕಳವು ನಡೆದಿರುವುದು ಭಕ್ತರಲ್ಲಿ ಆಘಾತ ಮೂಡಿಸಿದೆ.