ರೋಡಲ್ಲಿ ಸ್ವಾಮೀಜಿ ಸಿಗಲಿ ಕೊಚ್ಚಿ ಹಾಕ್ತೀವಿ ಅಂದಿದ್ದಾರೆ: ಸೋಮಶೇಖರ ಸ್ವಾಮೀಜಿ ಸ್ಫೋಟಕ ಹೇಳಿಕೆ

ಬೇಲೂರು: ತಾಲೂಕಿನ ಹಳೇಬೀಡಿನಲ್ಲಿರುವ ಶ್ರೀ ಕ್ಷೇತ್ರ ಪುಷ್ಪಗಿರಿ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮೀಜಿಗೆ ಜೀವ ಬೆದರಿಕೆ ಇದೆಯಾ ಎಂಬ ಅನುಮಾನ ಮೂಡಿವೆ.

ಈ ಬಗ್ಗೆ ಸ್ವತಃ ಶ್ರೀಗಳೇ ಸ್ಫೋಟಕ ಮಾಹಿತಿ ಹೊರಹಾಕಿದ್ದಾರೆ. ನಿನ್ನೆ ರಾತ್ರಿ ಪುಷ್ಪಗಿರಿ ಮಠದಲ್ಲೇ ನಡೆದ ಲಕ್ಷ ದೀಪೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ನೀವೇ ಮುಂದೆ ನಿಂತು ಕಾರ್ಯಕ್ರಮ ನಡೆಸಿಕೊಳ್ಳಿ, ನಾವು ನಿಮಿತ್ತ ಮಾತ್ರ ಇರ್ತೀವಿ. ಹೇಗೆ ಕಾರ್ಯಕ್ರಮ ಮಾಡಬೇಕು ಅಂತ ಹೇಳಿ ನಾವು ಮಾಡ್ಕಂಡು ಹೋಗ್ತೀವಿ, ಆದರೆ ನೀವು ಇರಬೇಕು, ಮುಂದೆ ಯಾರೇ ಬಂದರೂ ಕೂಡ ಸರ್ಕಾರ ಆಡಳಿತಾತ್ಮಕವಾಗಿ ಏನಿದೆ ಅದನ್ನು ನಡೆಸಿಕೊಂಡು ಹೋಗಿ, ಈ ಕಾರ್ಯಕ್ರಮವನ್ನು ಸರ್ಕಾರದ ಕಾರ್ಯಕ್ರಮದ ರೀತಿ ಮಾಡಿಕೊಂಡು ಹೋಗಿ ಎಂದು ಭಕ್ತರಿಗೆ ಕರೆ ಕೊಟ್ಟರು.

ಈ ಹಿಂದೆ ಮಾವಿನ ತೋರಣ ಕಟ್ಟುವಾಗ ಜಗಳವಾಗಿದೆ. ಬಹುಶಃ ನನಗೂ ಸಾಕಾಗುತ್ತಿದೆ. ಆದ್ದರಿಂದ ನೀವೇ ವಹಿಸಿಕೊಳ್ಳಿ. ಈ ಪುಷ್ಪಗಿರಿ ಕ್ಷೇತ್ರ ಯಾವ ಜಾತಿ, ಯಾವ ಕ್ಷೇತ್ರಕ್ಕೆ ಸೀಮಿತವಾಗಬಾರದು ಎಂಬ ಉದ್ದೇಶ ನಮಗಿದೆ. ಎಲ್ಲರಿಗೂ ಏಕಕಾಲದಲ್ಲಿ ಶಾಂತಿ, ಸಮಾಧಾನ ಬಿತ್ತುವಂತಹ, ಪ್ರಸಾದ ಕೊಡುವಂತಹ ಏಕೈಕ ಕ್ಷೇತ್ರ ಪುಷ್ಪಗಿರಿ ಆಗಬೇಕು ಎನ್ನುವುದು ನನ್ನ ಮನಸ್ಥಿತಿ ಎಂದರು.

ಹಾಗಾಗಿ ನಾವು ಯಾವತ್ತೂ ಒಂದು ಜಾತಿಗೆ ಸೀಮಿತವಾಗುವುದಿಲ್ಲ. ಇದನ್ನು ಉಳಿಸಿಕೊಳ್ಳಬೇಕು ಎಂಬ ಯೋಗ್ಯತೆ ಈ ಸಮಾಜಕ್ಕಿಲ, ಹಾಗಾಗಿ ಇದನ್ನು ಧಿಕ್ಕರಿಸುತ್ತೀವಿ ಎಂದು ಭಕ್ತರ ಮುಂದೆ ಅಳಲು ತೋಡಿಕೊಂಡರು. ಇದನ್ನು ನಿಮ್ಮ ವ್ಯಾಪ್ತಿಗೆ ತಗೊಳ್ಳಿ. ನನಗೆ ಗೊತ್ತಿದೆ ಬಹಳ ಜನ ಲೀಡರ್ ಕೆಳಗೆ ಹೆದರಿಕೊಂಡು ಕುಳಿತಿದ್ದಾರೆ. ವೇದಿಕೆ ಮೇಲೆ ಬಂದರೆ ನೀವು ಅಲ್ಲಿ ಯಾಕೆ ಹೋದ್ರಿ ಎಂದು ಪ್ರಶ್ನಿಸುತ್ತಾರೆ ಎಂಬ ಭಯ ಅವರಿಗೆ ಕಾಡುತ್ತಿದೆ ಎಂದು ನೇರವಾಗಿ ಹೇಳಿದರು.

ಒಂದೊಂದು ಸಾರಿ ನನ್ನ ಶಬ್ದಗಳು ಬಹಳ ಕಠಿಣವಾಗಿರುತ್ತವೆ. ನಾನು ದಿಟ್ಟತನದಿಂದ ಇದ್ದೀನಿ. ರಾಜ್ಯ ಬಿಜೆಪಿ ವಕ್ತಾರ ಚಂದ್ರಶೇಖರ್, ಇನ್ನೂ ಉಳಿದಿರುವ ಮೂವತ್ತು ವರ್ಷಕಾಲ ಆಳಿ ಅನ್ನುತ್ತಿದ್ದರು. ನಮಗೆ ಹದಿನೈದು ವರ್ಷಕ್ಕೇ ಸಾಕಾಗಿದೆ, ಇನ್ನೂ ದೇವರೇ ಬಲ್ಲ, ಸದ್ಯಕ್ಕೆ ಬೇಡಪ್ಪಾ ಉಳಿದ ಅವಧಿ ಅಂದರು.

ನಾವು ಕೆಲಸ ಮಾಡಿದ್ದೇವೆ, ನಮ್ಮ ಹೆಸರು ಉಳಿಯುತ್ತೆ, ನಮ್ಮ ಹೆಸರಿಗಾಗಿ ಹೋರಾಡುವುದೇನಿಲ್ಲ. ಇದನ್ನೂ ನನ್ನ ಸೇವೆ ಅಂತ ಭಾವಿಸಿದ್ದೇನೆ. ಇದು ಎಲ್ಲರಿಗೂ ಬೇಸರ ಆಗಬಹುದು, ಆದರೆ ನಮ್ಮ ನಿಲುವನ್ನ ಹೇಳಲೇಬೇಕು. ಹೇಳಿದ್ದೇನೆ. ಏಕೆಂದರೆ ಸಣ್ಣ ಸಣ್ಣ ಸಮಾಜಗಳು ಇವತ್ತು ದೊಡ್ಡ ದೊಡ್ಡ ಕ್ರಾಂತಿ ಮಾಡ್ತಿವೆ. ಅದನ್ನು ನೋಡಿದಾಗ ನಾವೂ ಅಲ್ಲಿ, ಇಲ್ಲಿ, ಇನ್ನೊಂದು ಮಾಡೋಣ ಅನ್ಸುತ್ತೆ. ಆ ಶಕ್ತಿ ಇದೆ, ಆದರೆ ಇದಲ್ಲದಕ್ಕೆ ಸಹಕಾರ ಸಿಗ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ತಹಸೀಲ್ದಾರ್ ಮಮತಾ, ಆಡಳಿತಾಧಿಕಾರಿ ಕಿಟ್ಟಪ್ಪ, ಕಾಂಗ್ರೆಸ್ ಮುಖಂಡ ಗ್ರಾನೈಟ್ ರಾಜಶೇಖರ್ ಮೊದಲಾದವರಿದ್ದರು.

ರೋಡ್‌ನಲ್ಲಿ ಸ್ವಾಮೀಜಿ ಸಿಗಲಿ ಕೊಚ್ಚಿ ಹಾಕ್ತೀವಿ, ಹೊಡೆದು ಹಾಕ್ತೀವಿ ಅಂತ ಈಗಾಗಲೇ ಹೇಳ್ತಿದ್ದಾರೆ. ಹಂಗೆಲ್ಲ ಕೊಚ್ಚಿಸಿಕೊಂಡು ಇನ್ನೊಂದು ಆಗೋದಕ್ಕಿಂತ, ಭಗವಂತ ಆಯಸ್ಸು ಕಡಿಮೆ ಮಾಡಿ ಅವರ ಕೈಯಲ್ಲಿ ಹೋಗುವಂತಹ ಅವಕಾಶ ನಮಗೆ ಸಿಕ್ಕರೆ ಅದು ಸ್ವರ್ಗ ಅಂತ ಭಾವಿಸುತ್ತೇವೆ. ಈಗ ವೀರ ಮರಣ ಹೊಂದಬೇಕು ಎನ್ನುತ್ತೇವೆ. ಹೆದರಿ ಹಿಂದೆ ಓಡಿ ಹೋಗಿ ಸಾಯೋಲ್ಲ. ಹಾಗಾಗಿ ಎದುರುಗಡೆ ಕೊಚ್ಚಿಸಿಕೊಂಡು ಹೋದರೆ ನಮಗೆ ಸ್ವರ್ಗ ಸಿಗುತ್ತೆ.

-ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ