ಹಾಸನ: ಪ್ರಸಕ್ತ ಸಾಲಿನ ಬುಕರ್ ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದ ಲೇಖಕಿ ಬಾನು ಮುಷ್ತಾಕ್ ಅವರ ಹಾಸನದ ಪೆನ್ಷನ್ ಮೊಹಲ್ಲಾದಲ್ಲಿರುವ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.
ಕುಟುಂಬಸ್ಥರು ಸಿಹಿಹಂಚಿಕೆಯ ಮೂಲಕ ಈ ಗೆಲುವನ್ನು ಆಚರಿಸಿದರು. ಬಾನು ಅವರ ಪುತ್ರ ತಾಹೀರ್, ಸೊಸೆ ಯಾಸಿನ್ ಹಾಗೂ ಮೊಮ್ಮಗಳಿಗೆ ಸಿಹಿತಿನ್ನಿಸಿ ಸಂತಸವನ್ನು ಹಂಚಿಕೊಂಡ ಪತಿ ಮುಷ್ತಾಕ್, “ಈ ಗೌರವ ಕರ್ನಾಟಕಕ್ಕೆ, ವಿಶೇಷವಾಗಿ ಹಾಸನ ಜಿಲ್ಲೆಗೆ ಸಿಕ್ಕಿರುವುದು ಅತೀವ ಸಂತೋಷದ ವಿಷಯ. ಇಂಗ್ಲೆಂಡ್‌ನಲ್ಲಿ ಪ್ರಶಸ್ತಿ ಘೋಷಣೆಯವರೆಗೂ ಕುತೂಹಲದಿಂದ ಕಾದಿದ್ದೆವು. ಘೋಷಣೆಯಾದಾಗ ನಂಬಲಾಗಲಿಲ್ಲ,” ಎಂದು ಭಾವುಕರಾದರು.
ಕನ್ನಡದ ಸತ್ವಕ್ಕೆ ಜಾಗತಿಕ ಮನ್ನಣೆ:
‘ಹಾರ್ಟ್ ಲ್ಯಾಂಪ್’ ಕೃತಿಯು ಫೆಬ್ರವರಿ 2025ರಲ್ಲಿ ಬುಕರ್ ಪ್ರಶಸ್ತಿಯ ಲಾಂಗ್‌ಲಿಸ್ಟ್‌ಗೆ ಆಯ್ಕೆಯಾಗಿದೆ. ಏಪ್ರಿಲ್‌ನಲ್ಲಿ ಶಾರ್ಟ್‌ಲಿಸ್ಟ್‌ಗೆ ಆಯ್ಕೆಯಾದ ನಂತರ, ಇಂದು ಮುಂಜಾನೆ ಲಂಡನ್‌ನ ಸಮಾರಂಭದಲ್ಲಿ ವಿಜೇತ ಕೃತಿಯಾಗಿ ಘೋಷಿತವಾಯಿತು. “ಅನುವಾದಿತ ಕೃತಿಗಳು ಇಷ್ಟು ದೂರ ಆಯ್ಕೆಯಾಗುವುದೇ ದೊಡ್ಡ ಸಾಧನೆಯಾಗಿತ್ತು. ಆದರೆ ಬುಕರ್ ಪ್ರಶಸ್ತಿಯನ್ನೇ ಗೆಲ್ಲುವುದು ಕನ್ನಡದ ಹೆಮ್ಮೆಯ ಕ್ಷಣ,” ಎಂದು ಬಾನು ಅವರ ಪತಿ ಮುಷ್ತಾಕ್ ಹಾಗೂ ಪುತ್ರ ತಾಹೀರ್ ಸಂತಸ ವ್ಯಕ್ತಪಡಿಸಿದರು.