ಹಾಸನ: ನಗರದಲ್ಲಿ ಒಂದೇ ದಿನ ಮೂರು ಕಡೆ ಸರಗಳ್ಳತನ ನಡೆದಿದ್ದು ಮಹಿಳೆಯರು ಮನೆಯಿಂದ ಹೊರಬರಲು ಹಿಂದೇಟು ಹಾಕುವಷ್ಟು ಆತಂಕ ಸೃಷ್ಟಿಯಾಗಿದೆ.
ನಗರದ ಆದಾಯ ತೆರಿಗೆ ಕಚೇರಿ ಹಿಂಭಾಗ ವಿಜಯನಗರದ 3ನೇ ಕ್ರಾಸ್‌ನ ನಿವಾಸಿ ಪುಟ್ಟ ಲಕ್ಷ್ಮಮ್ಮ ಅವರು ಶನಿವಾರ ಬೆಳಿಗ್ಗೆ ಹೂ-ತರಕಾರಿ ತೆಗೆದುಕೊಂಡು ವಾಪಾಸ್ ಮನೆಗೆ ಹೋಗಲು ಆದಾಯ ತೆರಿಗೆ ಕಚೇರಿ ಹಿಂಭಾಗ ನಡೆದುಕೊಂಡು ಹೋಗುತ್ತಿದ್ದ ವೇಳೆ ಬೈಕ್ ಅಪರಿಚಿತ ವ್ಯಕ್ತಿ, 45 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ.
ಮತ್ತೊಂದು ಪ್ರಕರಣದಲ್ಲಿ ವಿದ್ಯಾನಗರದ ತನ್ವಿತ್ರಿಶಾ ಕಲ್ಯಾಣ ಮಂಟಪ ಸಮೀಪ ಒಡಿಸ್ಸಾ ರಾಜ್ಯದ ಮಾನಸಿ ಅವರು ಶನಿವಾರ ಸಂಜೆ ಹಾಸನಾಂಬ ಡೆಂಟಲ್ ಕಾಲೇಜಿನ ಹತ್ತಿರವಿರುವ ಗಣಪತಿ ದೇವಸ್ಥಾನಕ್ಕೆ ಹೋಗಿ ಪೂಜೆ ಮುಗಿಸಿಕೊಂಡು ಮನೆಗೆ ಹೋಗಲು ವಿಶ್ವೇಶ್ವರ ಭವನದ ಮುಂಭಾಗ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್‌ನಲ್ಲಿ ಬಂದ ಸರಗಳ್ಳ ಮಹಿಳೆಯ ಕೊರಳಿನಲ್ಲಿದ್ದ 15 ಗ್ರಾಂ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾನೆ.
ತಾಲ್ಲೂಕಿನ ದುದ್ದ ಹೋಬಳಿ ಹೆರಗು ಗ್ರಾಮದ ಪದ್ಮ ಅವರು ನಗರದ ಗೌರಿಕೊಪ್ಪಲು ಬಡಾವಣೆಯ ಬಿಜೆಎಸ್ ಶಾಲೆಯ ಪಕ್ಕ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು. ಶನಿವಾರ ಸಂಬಂಧಿಕರ ಮನೆಗೆ ಹೋಗಿ ವಾಪಾಸ್ ಮನೆಗೆ ಹೋಗಲೆಂದು ಮಾಜಿ ಶಾಸಕ ಪ್ರೀತಂ ಜೆ.ಗೌಡ ಅವರ ಮನೆಯ ಬಳಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದ ಅಪರಿಚಿತ ವ್ಯಕ್ತಿ, ಪದ್ಮ ಅವರ ಕೊರಳಿನಲ್ಲಿದ್ದ 1,50 ಲಕ್ಷರೂ. ಮೌಲ್ಯದ 33 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ.
ಮೂರನೇ ಪ್ರಕರಣದಲ್ಲಿ ಸರಗಳ್ಳನ ಚಲನವಲನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ನಗರದಲ್ಲಿ ಈಚಿನ ದಿನಗಳಲ್ಲಿ ಸರಗಳ್ಳತನ ಪ್ರಕರಣಗಳು ಹೆಚ್ಚುತ್ತಿರುವುದು ಸಾರ್ವಜನಿಕ ವಲಯದಲ್ಲಿ ಆತಂಕಕ್ಕೆ ಕಾರಣವಾಗಿದೆ.