ಹಾಸನ, ಫೆಬ್ರವರಿ 7: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಯುವಕನೊಬ್ಬನ ಮೇಲೆ ಮಾಟ ಪ್ರಯೋಗ ಮಾಡಿ ಕೊಲ್ಲಲಾಗಿದೆ ಎಂಬ ಶಂಕೆ ಹಿನ್ನೆಲೆಯಲ್ಲಿ ಎದುರಾಳಿ ಕುಟುಂಬದ ವೃದ್ಧೆಯ ಮೇಲೆ ಮೃತ ಯುವಕನ ಕುಟುಂಬ ಸದಸ್ಯರು ಹಲ್ಲೆ ನಡೆಸಿ, ಬಲವಂತವಾಗಿ ವಿಷ ಪ್ರಾಶನ ಮಾಡಿಸಿ ಹತ್ಯೆ ಮಾಡಿದ್ದಾರೆ ಎಂಬ ದೂರು ಕೇಳಿ ಬಂದಿದೆ.
ಬೇಲೂರು ತಾಲೂಕು ಮಾಳಗೆರೆಯ 65 ವರ್ಷದ ವೃದ್ಧೆ ನಂಜಮ್ಮ ಹಲ್ಲೆಗೊಳಗಾದ ಬಳಿಕ ವಿಷ ಪ್ರಾಶನದಿಂದ ಮೃತಪಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆಯಲ್ಲಿ ಶಂಕರೇಗೌಡ ಕೂಡ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಂಜಮ್ಮನ ಸಹೋದರ ಮಂಜೇಗೌಡ ಅವರ ಪುತ್ರ ಸಂಪತ್ ಒಂದು ತಿಂಗಳ ಹಿಂದೆ ಆಂಧ್ರಪ್ರದೇಶದಲ್ಲಿ ಅನಾರೋಗ್ಯದಿಂದ ಮೃತಪಟ್ಟಿದ್ದರು. ಅತನ ಸಾವಿಗೆ ನಂಜಮ್ಮ ಮತ್ತು ಅವರ ಪತಿ ಶಂಕರೇಗೌಡ ಅವರು ಮಾಡಿಸಿದ ಮಾಟವೇ ಕಾರಣವೆಂದು ಶಂಕಿಸಿ, ಅವರ ವಿರುದ್ಧ ಮಂಜೇಗೌಡ ಕುಟುಂಬ ಆಕ್ರೋಶಗೊಂಡಿತ್ತು.
ಈ ಸಂಬಂಧ ಫೆಬ್ರವರಿ 2 ರಂದು ಮನೆ ಬಳಿ ಬಂದು ಎದುರಾಳಿಗಳು ಜಗಳ ತೆಗೆದು ನಂಜಮ್ಮನ ಮೇಲೆ ಹಲ್ಲೆ ನಡೆಸಿ, ಬಲವಂತವಾಗಿ ವಿಷ ಕುಡಿಸಿದ ಆರೋಪ ಕೇಳಿಬಂದಿದೆ. ಈ ಕೃತ್ಯಕ್ಕೆ ಮಂಜೇಗೌಡ, ನೀಲಮ್ಮ, ಸಾವಿತ್ರಮ್ಮ ಮತ್ತು ಮಧು ಕಾರಣರಾಗಿದ್ದಾರೆ ಎಂದು ನಂಜಮ್ಮ ಕುಟುಂಬದವರು ಆರೋಪಿಸಿದ್ದಾರೆ.