ಹಾಸನ, ಏಪ್ರಿಲ್ 14: ಸಕಲೇಶಪುರ ತಾಲ್ಲೂಕಿನ ಅಚ್ಚರಡಿ ಗ್ರಾಮದ ರೆಸಾರ್ಟ್‌ವೊಂದರಲ್ಲಿ ಬೇಸಿಗೆ ರಜೆಯನ್ನು ಆನಂದಿಸಲು ಕುಟುಂಬ ಸಮೇತ ಆಗಮಿಸಿದ್ದ ಮಂಗಳೂರು ಮೂಲದ ಪ್ರವಾಸಿಗರ ಮೇಲೆ ರೆಸಾರ್ಟ್ ಮಾಲೀಕ ಹಾಗೂ ಕಾರ್ಮಿಕರಿಂದ ಹಲ್ಲೆ ನಡೆದ ಆರೋಪ ಕೇಳಿಬಂದಿದೆ.
ಮಹಿಳೆಯರು, ಮಕ್ಕಳು ಸೇರಿದಂತೆ ಸುಮಾರು 15 ಜನರ ಮೇಲೆ ವಿಕೆಟ್, ಬ್ಯಾಟ್‌ಗಳಿಂದ ದಾಳಿ ನಡೆಸಿರುವ ಆರೋಪವಿದೆ.
ಘಟನೆಯ ಹಿನ್ನೆಲೆ: ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ಮಂಗಳೂರಿನಿಂದ ಕುಟುಂಬಗಳು ರೆಸಾರ್ಟ್‌ನಲ್ಲಿ ತಂಗಲು ಬಂದಿದ್ದವು. ರೆಸಾರ್ಟ್ ಮಾಲೀಕರು 24 ಗಂಟೆಯೊಳಗೆ ಚೆಕ್‌ಔಟ್ ಮಾಡದಿದ್ದರೆ ಹೆಚ್ಚಿನ ಶುಲ್ಕ ವಿಧಿಸುವುದಾಗಿ ತಿಳಿಸಿದ್ದರು.
ಇದಕ್ಕೆ ಒಪ್ಪಿದ್ದ ಪ್ರವಾಸಿಗರು, ಪೂರ್ತಿ ಹಣವನ್ನು ಪಾವತಿಸಿ ರೆಸಾರ್ಟ್‌ನಲ್ಲಿ ತಂಗಿದ್ದರು. ಆದರೆ, ಚೆಕ್‌ಔಟ್‌ಗೆ ಇನ್ನೂ ಎರಡು ಗಂಟೆಗಳು ಬಾಕಿಯಿರುವಾಗಲೇ ರೆಸಾರ್ಟ್ ಖಾಲಿ ಮಾಡುವಂತೆ ಮಾಲೀಕ ಒತ್ತಾಯಿಸಿದ್ದಾರೆ. ಇದನ್ನು ಪ್ರಶ್ನಿಸಿದ ಪ್ರವಾಸಿಗರೊಂದಿಗೆ ಶುರುವಾದ ವಾಗ್ವಾದ ವಿಕೋಪಕ್ಕೆ ತಿರುಗಿದೆ.
ಆರೋಪದ ಪ್ರಕಾರ, ರೆಸಾರ್ಟ್ ಮಾಲೀಕ ಹಾಗೂ ಅಸ್ಸಾಂ ಮೂಲದ ಕಾರ್ಮಿಕರು ಕುಟುಂಬದ ಸದಸ್ಯರ ಮೇಲೆ ವಿಕೆಟ್ ಮತ್ತು ಬ್ಯಾಟ್‌ಗಳಿಂದ ದಾಳಿ ನಡೆಸಿದ್ದಾರೆ. ಗಾಯಗೊಂಡವರು ಸ್ಥಳೀಯವಾಗಿ ಹಾನುಬಾಳು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದ ನಂತರ ಸಕಲೇಶಪುರದ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಕೆಲವರು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ತೆರಳಿದ್ದಾರೆ.