ಕಾಶಿ ವಿಶ್ವೇಶ್ವರನ ಪೂಜೆಗೆ ಹೆಬ್ಬಾಲೆಯಾಗಿತ್ತು ದತ್ತಿ‌ ಗ್ರಾಮ; ಕಾಶಿ-ಹಾಸನ ನಂಟಿಗೆ ಸಾಕ್ಷಿ ಹೆಬ್ಬಾಲೆ ಶಾಸನಗಳು

ತನಗೆ ದೊರೆಯಬೇಕಾದ ಪ್ರಾತಿನಿಧ್ಯವನ್ನು ಪಡೆಯದೆ ಅಜ್ಞಾತವಾಗಿ ಉಳಿದಿರುವ ಎರಡು ಮಹಾನ್ ಶಾಸನ ಕಂಡುಬರುತ್ತದೆ, ಅದೇ " ಹೆಬ್ಬಾಲೆ ಶಾಸನ"

ಡಾ.ಎನ್. ರಮೇಶ್
ಕಾಶಿ ವಿಶ್ವೇಶ್ವರ ದೇವಾಲಯದಲ್ಲಿ ( “ಜ್ಞಾನ ವ್ಯಾಪಿ”) ಕನ್ನಡ ಲಿಪಿಗಳ ಹಿನ್ನೆಲೆಯಲ್ಲಿ ಕರ್ನಾಟಕ ಮತ್ತು ಕಾಶಿಗು ಇರುವ ನಂಟು “ಹೆಬ್ಬಾಲೆ ಶಾಸನ”

ಕಾಶಿ ವಿಶ್ವೇಶ್ವರ ದೇವಾಲಯದ ಆರ್ಕಿಯಾಲಜಿಕಲ್ ಸರ್ವೆ ವರದಿಯಲ್ಲಿ ( “ಜ್ಞಾನ ವ್ಯಾಪಿ”) ಕನ್ನಡ ಲಿಪಿಗಳು ಕಂಡು ಬಂದಿರುವುದು ಇಂದು ದೇಶಾದ್ಯಂತ ಚರ್ಚೆಯಾಗುತ್ತಿದೆ.

ಕಾಶಿ ವಿಶ್ವೇಶ್ವರನಿಗೆ ಮತ್ತು ಕರ್ನಾಟಕಕ್ಕೂ ಧಾರ್ಮಿಕವಾಗಿ ಮೀರಿದ ಸಂಬಂಧ ಏನಾದರೂ ಇದೆಯೇ ಎಂಬ ವಿಚಾರ ಹುಡುಕುತ್ತಾ ಹೊರಟಾಗ, ತನಗೆ ದೊರೆಯಬೇಕಾದ ಪ್ರಾತಿನಿಧ್ಯವನ್ನು ಪಡೆಯದೆ ಅಜ್ಞಾತವಾಗಿ ಉಳಿದಿರುವ ಎರಡು ಮಹಾನ್ ಶಾಸನ ಕಂಡುಬರುತ್ತದೆ, ಅದೇ ” ಹೆಬ್ಬಾಲೆ ಶಾಸನ”

“ಹೆಬ್ಬಾಲೆ” ಹಾಸನ ಜಿಲ್ಲಾ ಕೇಂದ್ರದಿಂದ 30 ಕಿ.ಮೀ. ದೂರದಲ್ಲಿರುವ ಪುಟ್ಟ ಗ್ರಾಮ, ಸುತ್ತಮುತ್ತ ಸದಾ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಈ ಗ್ರಾಮಕ್ಕೆ ಸಂಬಂಧಪಟ್ಟಂತೆ ಎರಡು ಶಾಸನಗಳು ಈ ಗ್ರಾಮಕ್ಕೂ ಮತ್ತು ಕಾಶಿಗೂ ಇದ್ದ ‌ಸಂಬಂಧವನ್ನು ಸೂಚಿಸುತ್ತದೆ.

ಹೆಬ್ಬಾಲೆ ಶಾಸನ 1
(ಶಾಸನ ಸಂಖ್ಯೆ 181, ಎಪಿಗ್ರಾಫಿಯಾ ಕರ್ನಾಟಕ ಸಂಪುಟ 9) ಕನ್ನಡ ಮತ್ತು ಸಂಸ್ಕೃತ ಭಾಷೆಯ, ಬೇಲೂರಿನ ಖಜಾನೆಯಲ್ಲಿ ರುವ ಶಾಸನ.;

ಹೊಯ್ಸಳ ರಾಜ ಮೂರನೇ ನರಸಿಂಹನ ಕಾಲ,1279ನೇ ಇಸವಿಯ ಸುದೀರ್ಘ ತಾಮ್ರ ಶಾಸನ.

ಕಾಶಿ ವಿಶ್ವೇಶ್ವರ ದೇವರ ಪೂಜೆಗೆ ಕೊಂಗನಾಡು ಹೆಬ್ಬಾಲೆ ಗ್ರಾಮವನ್ನು ದತ್ತಿನೀಡಿ 645 ಗದಾಣ್ಯಗಳನ್ನು ನೀಡಿರುವುದನ್ನು ಈ ತಾಮ್ರ ಶಾಸನವು ತಿಳಿಸುತ್ತದೆ. ಯಾತ್ರೆಗೆಂದು ಹೋಗುವ ಹಿಂದೂಗಳು ಅಂದಿನ ಮುಸಲ್ಮಾನ ರಾಜರಿಗೆ ಸಲ್ಲಬೇಕಾದ ತೆರಿಗೆಯನ್ನು ಸಲ್ಲಿಸಲು ಧನ ಸಹಾಯ ಮಾಡಿಕೊಟ್ಟಿರುವುದು, ಹೊಯ್ಸಳರ ಧರ್ಮನಿಷ್ಠೆಯನ್ನು ಎತ್ತಿ ತೋರಿಸುತ್ತದೆ. ಈ ಶಾಸನದ ಮಹತ್ವ ತಿಳಿಯಲು 13ನೇ ಶತಮಾನದ ಕಾಶಿಯ ರಾಜಕೀಯ ಪರಿಸ್ಥಿತಿ ಕಡೆ ಗಮನ ಹರಿಸಬೇಕಾಗುತ್ತದೆ ಮಹಮ್ಮದ್ ಘೋರಿ ಬಂಟ ಕುತುಬ್ ಇನ್ ಐಬಕ್ ಉತ್ತರ ಭಾರತದ ಮೇಲೆ ಅವ್ಯಾಹತವಾಗಿ ದಾಳಿ ನಡೆಸಿ ಕಾಶಿಯಲ್ಲಿ ನೂರಾರು ದೇವಾಲಯಗಳನ್ನು ನೆಲ ಸಮ ಮಾಡಿದ.

ಹಾಗೆಯೆ ಅಲ್ಲಿಗೆ ಹಿಂದೂ ರಾಜರ ಆಳ್ವಿಕೆ ಕೊನೆಗೊಂಡು ಮುಸ್ಲಿಂ ರಾಜರ ರಾಜ್ಯಭಾರ ಆರಂಭವಾಯಿತು. ಹೊಯ್ಸಳರ ರಾಜ ಮೂರನೇ ವೀರ ನರಸಿಂಹ ರಾಜ್ಯಭಾರ ಮಾಡುತ್ತಿದ್ದ ಸರಿ ಸುಮಾರು ಅದೇ ಸಮಯದಲ್ಲಿ ಕಾಶಿಯಲ್ಲಿ ಗಿಯಾಸುದ್ದೀನ್ ಬಲ್ಬನ್ ಏಂಬ ಮುಸ್ಲಿಂ ರಾಜ ರಾಜ್ಯಬಾರ ಮಾಡುತ್ತಿದ್ದನು. ಆ ಸಮಯದಲ್ಲಿ ಹಿಂದುಗಳ ಮೇಲೆ ತೆರಿಗೆಯನ್ನು ವಿಧಿಸುತ್ತಿದ್ದದು ಸಾಮಾನ್ಯವಾಗಿತ್ತು. ಹೊಯ್ಸಳ ನಾಡಿನ ಹಿಂದೂ ಧಾರ್ಮಿಕರು ಕಾಶಿ ಯಾತ್ರೆ ಯನ್ನು ಸುಗಮವಾಗಿ ನಡೆಸಲು ಹೊಯ್ಸಳ ರಾಜರು ಹೆಬ್ಬಾಲೆ ಗ್ರಾಮವನ್ನು ದತ್ತಿ ನೀಡಿ, ಬರುವ ಆದಾಯದಲ್ಲಿ ಮುಸಲ್ಮಾನರಿಗೆ ಸಲ್ಲಬೇಕಾದ ತೆರಿಗೆಯನ್ನು (ಸಿದ್ದಾಯ) ಪಾವತಿಸಲಾಗುವಂತೆ ಶಾಸನದಲ್ಲಿ ಹೇಳಲಾಗಿದೆ . ಅದರಂತೆ ವಾರಣಾಸಿ ಯಲ್ಲಿರುವ ಎಲ್ಲ ಕ್ಷೇತ್ರ ವಾಸಿಗಳು ತುರುಕರಿಗೆ (ಮಹಮ್ಮದೀಯರಿಗೆ) ಸೇರುವ
ಸಿದ್ದಾಯಕ್ಕೆ ಕೂಟ್ಟ ಹೂನ್ನಿನ ಕುಳ ಎಂದು ಸ್ಪಷ್ಟಪಡಿಸಿ ಅದರಲ್ಲಿ ಕನ್ನಡಿಗರಿಗೆ ತಿಗುಳರಿಗೆ ತೆಲುಗರಿಗೆ ಮಲಯಾಳಿಗಳಿಗೆ ಹೀಗೆ ಎಲ್ಲ ಭಾಷೆ ಮಾತನಾಡುವ ಪ್ರತಿ ಹಿಂದುವಿಗೂ ಕೂಡ ಇಂತಿಷ್ಟು ಹಣ ಪಾವತಿಸಬೇಕೆಂದು ಶಾಸನದಲ್ಲಿ ತಿಳಿಸಲಾಗಿದೆ.

ಹಾಗೆಯೆ ವಿಶ್ವೇಶ್ವರ ದೇವರ ಅಮೃತ ಪಡಿಗೆ ನಂದಾದೀವಿಗೆಗೆ, ಆಚಾರ್ಯರಿಗೆ, ಪಾರುಪತ್ತೆಗಾರರಿಗೆ ಭಿಕ್ಷೆಗೆ, ಬಾಣಸಿಗರಿಗೆ, ಅಗ್ನಿಷ್ಟಿಕೆಗೆ ಹೀಗೆ ಇನ್ನು ಅನೇಕ ಸೂಕ್ಷ್ಮಾತಿಸೂಕ್ಷ್ಮ ವಿಚಾರಗಳಿಗೂ ಇಂತಿಷ್ಟು ಹಣ ಎಂದು ನಿಗದಿಪಡಿಸಿ ದ್ದಾರೆ. 645 ವರಹಗಳನ್ನು ಪಿಂಡದಾನ ಪರಿಹಾರಾರ್ಥವಾಗಿ ವಿಶ್ವೇಶ್ವರ ದೇವರ ಅಮೃತ ಪಡಿ ಮೊದಲಾದ ಎಲ್ಲ ಧರ್ಮ ಕಾರ್ಯಗಳಿಗೂ ಆಚಂದ್ರಾರ್ಕವಾಗಿ ಸಲ್ಲುವಂತೆ ಆಗಬೇಕೆಂದು ಆದೇಶಿಸುವ ಮಹಾನ್ ಶಾಸನ ಇದಾಗಿದೆ.

ಹೆಬ್ಬಾಲೆ ಶಾಸನಗಳ ಮೂಲಕ ಅಂದಿನ ರಾಜಕೀಯ ಸ್ಥಿತಿ , ಸಾಮಾಜಿಕ ವ್ಯವಸ್ಥೆ, ಧಾರ್ಮಿಕ ವ್ಯವಸ್ಥೆ, ಆರ್ಥಿಕ ಪರಿಸ್ಥಿತಿ, ತೆರಿಗೆ ಪದ್ಧತಿ ವಿಷಯಗಳನ್ನು ತಿಳಿದುಕೊಳ್ಳುವುದರ ಜತೆಗೆ ಮಹಮದೀಯ ರಾಜರು ಹಿಂದುಗಳ ಮೇಲೆ ವಿಧಿಸುತ್ತಿದ್ದ ತೆರಿಗೆಯ ಬಗ್ಗೆ ಬೆಳಕನ್ನು ಚೆಲ್ಲುತ್ತದೆ. ಭಾಷೆ, ಧರ್ಮ, ಸಂಸ್ಕೃತಿ ಅಥವಾ ಸಾಮಾಜಿಕ ಮೌಲ್ಯಗಳನ್ನು ತಮ್ಮದೇ ಇತಿಮಿತಿಗಳಲ್ಲಿ ಭಾರತೀಯ ಶ್ರೇಷ್ಠತೆಯ ಭಾವನೆಗಳನ್ನು ಹೊಯ್ಸಳರು ಎತ್ತಿ ಹಿಡಿದಿರುವುದನ್ನು ತೋರಿಸುತ್ತದೆ.

ಹೆಬ್ಬಾಲೆ ಶಾಸನ 2 (ಶಾಸನ ಸಂಖ್ಯೆ.15, ಎಪಿಗ್ರಾಫಿಯಾ ಕರ್ನಾಟಕ ಸಂಪುಟ 8);

ಹೊಯ್ಸಳ ರಾಜ ಒಂದನೇ ನರಸಿಂಹ,1159ನೇ ಇಸವಿ ಶಾಸನ. ಹೆಬ್ಬಾಲೆ ಗ್ರಾಮ ಉಪ್ಪರಿಗೆ ಬಸವನ ದೇವಾಲಯದ ಕೆಳಗೆ ಇರುವ ಕಲ್ಲಿನ ಮೇಲೆ ಕೆತ್ತಿರುವ ಶಾಸನ.
ಕೊಂಗನಾಡೂಳಗಣ ಹೆಬ್ಬಾಲೆ ಗ್ರಾಮವನ್ನು ಕುತ್ತುವಿತ್ತಿಯಾಗಿ ದಾನ ನೀಡಿ ಬರುವ ಆದಾಯವನ್ನು ಮಹಾನ್ ತೀರ್ಥಕ್ಷೇತ್ರವಾದ ವಾರಣಾಸಿ ವಿಶ್ವೇಶ್ವರ ದೇವಾಲಯದಲ್ಲಿ ಪೂಜೆ ಮತ್ತು ನೈವೇದ್ಯಾದಿ ಸೇವೆಗಳಿಗೆ ನೀಡಲಾಗಿದೆ ಎಂದು ಈ ಶಾಸನವು ತಿಳಿಸುತ್ತದೆ. ಈ ಶಾಸನದ ಪ್ರಕಾರ ನಾಡಿನ ಅಧಿಕಾರಿಗಳು ಗ್ರಾಮಕ್ಕೆ ಹೋಗಕೂಡದು ಹಾಗೂ ಮಂಗಳವಾರದ ಸಂತೆಯಲ್ಲಿ ಅಧಿಕಾರಿಗಳು ತೆರಿಗೆ ವಸೂಲಿಗೆ ಮುಂದಾದರೆ ಅರಸನ ಆಣೆಯೆಂದು ಸಹ ತಿಳಿಸಿದೆ. ಈ ಶಾಸನವು ಒಂದನೇ ವೀರನರಸಿಂಹ 1159ನೇ ಇಸವಿಯಲ್ಲಿ,(900 ವರ್ಷಗಳ ಹಿಂದೆ) ಗ್ರಾಮವನ್ನು ವಾರಣಾಸಿ ವಿಶ್ವೇಶ್ವರ ದೇವರ ನೈವೇದ್ಯಾದಿ ಪೂಜೆಗಳಿಗೆ ದತ್ತಿ ನೀಡಿರುವುದು ಹೊಯ್ಸಳ ಸಾಮ್ರಾಜ್ಯಕ್ಕೂ ಮತ್ತು ವಾರಣಾಸಿಗೆ ಇದ್ದಂತಹ ಪವಿತ್ರ ಸಂಬಂಧಕ್ಕೆ ಸಾಕ್ಷಿಯಾಗಿದೆ.

ಕರ್ನಾಟಕ ಮತ್ತು ಕಾಶಿಗೂ ಇರುವ ನಂಟಿಗೆ ಜೀವಂತ ಸಾಕ್ಷಿಯಾಗಿ ಈ ಶಾಸನಗಳು ನಿಂತಿವೆ.