ಶ್ರೇಯಸ್ ಪಟೇಲ್ ಕುಟುಂಬದ ಕೆಲಸ ಝೀರೋ, ಅದಕ್ಕೇ ಜನರು‌ ಅವಕಾಶ ಕೊಡ್ತಿಲ್ಲ, ನಾವು ಅಭಿವೃದ್ಧಿ ಧಾರೆ ಎರೆದಿದ್ದೇವೆ; ಸೂರಜ್ ರೇವಣ್ಣ

ಅವರ ತಾತನ್ನ ಎಮ್ಮೆಲ್ಸಿ ಮಾಡಿರಲಿಲ್ಲವೇ? ಎಮ್ಮೆಲ್ಲೆ, ಮಂತ್ರಿ, ಎಂಪಿ ಆಗಿರಲಿಲ್ವಾ?

ಹಾಸನ: ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಟುಂಬದವರು ಅಧಿಕಾರ ಇದ್ದಾಗ ಮಾಡಿದ ಕೆಲಸ ಶೂನ್ಯ. ಹೀಗಾಗಿ ಜನರು ಅವರಿಗೆ ಅಧಿಕಾರ ಕೊಡುತ್ತಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ ಹೇಳಿದರು.

ಅರಸೀಕೆರೆ ತಾಲ್ಲೂಕಿನ, ನಾಗರಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಜೆಡಿಎಸ್-ಬಿಜೆಪಿ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್ ಅಭ್ಯರ್ಥಿ ಇಲ್ಲಿ ಭಾಷಣ ಮಾಡಿದ್ದಾರೆ. ನಮ್ಮ ಕುಟುಂಬವನ್ನು ಉಲ್ಲೇಖಿಸಿ ಅವರ ಕುಟುಂಬಕ್ಕೆ ಪಂಚಾಯಿತಿಯಿಂದ ಪ್ರಧಾನಿವರೆಗೂ ಅವಕಾಶ ಕೊಟ್ಟಿದ್ದೀರಿ, ನಮಗೆ ಒಂದು ಬಾರಿ ಅವಕಾಶ ಕೊಡಿ ಅಂತ ಕೇಳಿದ್ದಾರೆ.

ಅವರ ಕುಟುಂಬಕ್ಕೆ ಜನರು ಅವಕಾಶ ಕೊಟ್ಟಿಲ್ವಾ? ಅವರ ತಾತ ಅವರನ್ನು ಎಂಎಲ್‌ಸಿ ಮಾಡಿಲ್ವಾ? ಮಾಡಿದ ಪುಣ್ಮಾತ್ಮರು ಇಲ್ಲೇ ಕೂತಿದ್ದಾರೆ ಎಂದು ದೇವೇಗೌಡರ ಕಡೆಗೆ ಕೈ ತೋರಿದರು.

ಅವರ ತಾತ ಅವರನ್ನು ಐದು ವರ್ಷ ಶಾಸಕರನ್ನಾಗಿ ಮಾಡಿಲ್ವ? ಅವರು ಮಂತ್ರಿ ಆಗಿಲ್ಲವೇ? ಐದು ವರ್ಷ ಎಂಪಿ ಆಗಿರಲಿಲ್ಲವೇ? ಈಗ ಅವರಿಗೆ ಜನ ಏಕೆ ಅವಕಾಶ ಕೊಡ್ತಿಲ್ಲ ಅಂದರೆ ಅವರ ಕೆಲಸ ಝೀರೋ ಎಂದು ವ್ಯಂಗ್ಯವಾಡಿದರು.

ಅದಕ್ಕೇ ಅವರಿಗೆ ಜನ ಬೆಂಬಲ ನೀಡುತ್ತಿಲ್ಲ.
ನಮಗೆ ಅಧಿಕಾರ ಕೊಟ್ಟಿದ್ದೀರಿ, ಅದಕ್ಕೆ ಅಭಿವೃದ್ಧಿಯನ್ನು ಧಾರೆ ಎರೆದಿದ್ದೇವೆ. ಈ ಪಾಪದವರಿಗೆ ಓಟು ಕೊಟ್ಟರೆ ಬರಗಾಲ ಬರುತ್ತೆ. ನೀವು ಮತ್ತೆ ಅದೇ ತಪ್ಪು ಮಾಡಬೇಡಿ.

ಇವತ್ತು ಇಲ್ಲಿನ ಶಾಸಕರು ಹಣ, ಅಟ್ಟಹಾಸ, ದುರಂಹಕಾರದಲ್ಲಿ ಮಾತನಾಡುತ್ತಿದ್ದಾರೆ. ಹಣವಿದ್ದರೆ ಏನು ಬೇಕಾದರೂ ಮಾಡ್ತಿನಿ ಅನ್ನುವ ದುರಂಹಕಾರ ಇದೆ. ಜನರಿಗೆ ದುಡ್ಡು ಕೊಟ್ಟು ಖರೀದಿ ಮಾಡಬಹುದು ಎಂದು ಕೊಂಡಿದ್ದಾರೆ.

ನೀವು ಪ್ರಜ್ವಲ್‌ರೇವಣ್ಣ ಅವರನ್ನು ಗೆಲ್ಲಿಸುವದರ ಜತೆಗೆ 2028 ಕ್ಕೆ ಅರಸೀಕೆರೆ ವಿಧಾನಸಭಾ ಕ್ಷೇತ್ರಕ್ಕೆ ದಿಕ್ಸೂಚಿ ಆಗಬೇಕು ಎಂದರು.