ಶಾರ್ಟ್ಸ್ ಧರಿಸಿದ್ದಕ್ಕೆ ಪತ್ನಿಯ ಕುತ್ತಿಗೆ ಕೊಯ್ದ ಪತಿರಾಯ!

ಹುಬ್ಬಳ್ಳಿ ಮೂಲದ ಹುಡುಗಿ ಆರು ತಿಂಗಳ ಹಿಂದಷ್ಟೇ ವಿವಾಹವಾಗಿದ್ದಳು; ಗಾರ್ಮೆಂಟ್ಸ್ ನಲ್ಲಿ ಅರಳಿದ್ದ ಪ್ರೀತಿ ಜೀವವನ್ನೇ ಬಲಿ ಪಡೆಯಿತು

ಹಾಸನ: ಮಾಡ್ರನ್ ಡ್ರೆಸ್ ಧರಿಸುವ ಅಭ್ಯಾಸವನ್ನು ಬದಲಿಸಿಕೊಳ್ಳಲು ಒಪ್ಪದ ಪತ್ನಿಯನ್ನು ಪತಿಯೇ ಕುತ್ತಿಗೆ ಕೊಯ್ದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಅರಸೀಕೆರೆ ತಾಲ್ಲೂಕಿನ, ರಾಂಪುರ ಗ್ರಾಮದಲ್ಲಿ ನಡೆದಿದೆ.

ಜ್ಯೋತಿ (22) ಕೊಲೆಯಾದ ಮಹಿಳೆ, ಜೀವನ್ (25) ಪತ್ನಿ ಕೊಲೆಗೈದ ಆರೋಪಿ.

ಮೂಲತಃ ಹುಬ್ಬಳ್ಳಿಯವರಾದ ಜ್ಯೋತಿ ಕೆಲಸಕ್ಕಾಗಿ ಅರಸೀಕೆರೆಗೆ ಬಂದು ನೆಲೆಸಿದ್ದರು. ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುವಾಗ ಪರಸ್ಪರ ಪ್ರೀತಿಸಿದ್ದ ಜ್ಯೋತಿ ರಾಂಪುರದ ಜೀವನ್, ಆರು ತಿಂಗಳ ಹಿಂದೆ ಮದುವೆಯಾಗಿದ್ದರು.

ಮಿಡಿ, ಸ್ಕರ್ಟ್ ನಂತಹ ಆಧುನಿಕ ಉಡುಗೆ ತೊಡುತ್ತಿದ್ದ ಜ್ಯೋತಿ, ವಿವಾಹದ ನಂತರವೂ‌ ಸಾಂಪ್ರದಾಯಿಕ ಉಡುಪು ಧರಿಸುತ್ತಿರಲಿಲ್ಲ.

ಇದರಿಂದ ಇಬ್ಬರ ನಡುವೆ ಆಗಾಗ್ಗೆ ಜಗಳವಾಗುತ್ತಿತ್ತು. ಶನಿವಾರ ಸಹ ಹೊರಗೆ ಹೊರಟ ಆಕೆ ಸ್ಕರ್ಟ್ ಧರಿಸಿದ್ದರು. ಇದರಿಂದ ಆಕ್ರೋಶಗೊಂಡ ಪತಿ, ಆಕೆಯನ್ನು ಡ್ರಾಪ್ ಕೊಡುವ ನೆಪದಲ್ಲಿ ರಾಂಪುರ ಹೊರವಲಯದ ಅರಣ್ಯ ಪ್ರದೇಶದಲ್ಲಿ ಕತ್ತು ಕೊಯ್ದು ಹತ್ಯೆ ಮಾಡಿ ಪರಾರಿಯಾಗಿದ್ದಾನೆ.

ಅರಸೀಕೆರೆ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಶವವನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.