ಮಧ್ಯರಾತ್ರಿ ವಕ್ಫ್ ತಿದ್ದುಪಡಿ ಮಸೂದೆ ಪಾಸ್: ಹೊಸ ಹೆಸರು, ಹೊಸ ನಿಯಮಗಳು!

New Delhi, Apr 02 (ANI): Opposition MPs protest in the Lok Sabha against the Waqf (Amendment) Bill during the Budget Session of Parliament, in New Delhi on Wednesday. (ANI Photo/SansadTV)

ನವದೆಹಲಿ: ತೀವ್ರ ಚರ್ಚೆ, ಪರ ವಿರೋಧದ ಚರ್ಚೆಗಳ ನಡುವೆ ಕಳೆದ ರಾತ್ರಿ ಮಧ್ಯರಾತ್ರಿ 1 ಗಂಟೆ ಬಳಿಕ ವಕ್ಫ್ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಅಂಗೀಕಾರಗೊಂಡಿದೆ. ಇನ್ನು ಮುಂದೆ ‘ವಕ್ಫ್ ಬೋರ್ಡ್’ ಎಂಬ ಹೆಸರಿನ ಬದಲಾಗಿ, ಇದನ್ನು ‘ಉಮ್ಮೀದ್ ಬಿಲ್‘ ಎಂದು ಕರೆಯಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಇದೀಗ ಮಸೂದೆ ರಾಜ್ಯಸಭೆಯಲ್ಲಿ ಮಂಡನೆಯಾಗಲು ಸಜ್ಜಾಗಿದೆ.

ಮ್ಯಾರಥಾನ್ ಚರ್ಚೆ ಬಳಿಕ ಅಂಗೀಕಾರ

ನಿನ್ನೆ ದಿನವಿಡೀ ಸಂಸತ್‌ನಲ್ಲಿ ನಡೆದ ಚರ್ಚೆಯು ಮಧ್ಯರಾತ್ರಿಯವರೆಗೆ ಮುಂದುವರಿಯಿತು. ಚರ್ಚೆಯ ಅಂತ್ಯದಲ್ಲಿ ಸ್ಪೀಕರ್ ಮಸೂದೆಯನ್ನು ಮತದಾನಕ್ಕೆ ಇಟ್ಟಿದ್ದು, 288 ಮತಗಳು ಮಸೂದೆ ಪರವಾಗಿ ಬಿದ್ದರೆ, 232 ಮತಗಳು ವಿರೋಧ ವ್ಯಕ್ತಪಡಿಸಿದವು. ವಿರೋಧ ಪಕ್ಷಗಳ ಒತ್ತಾಯದ ಮೇರೆಗೆ ಡಿವಿಜನ್ ಆಫ್ ವೋಟಿಂಗ್ ಪ್ರಕ್ರಿಯೆ ಕೈಗೊಳ್ಳಲಾಯಿತು. ಬಹುಮತ ದೊರೆತ ಕಾರಣ ಮಸೂದೆ ಅಂಗೀಕೃತಗೊಂಡಿದ್ದು, ಸ್ಪೀಕರ್ ಓಂ ಬಿರ್ಲಾ ಅಧಿಕೃತ ಘೋಷಣೆ ನೀಡಿದರು.

ಹೆಸರು ಬದಲಾವಣೆ:

ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಮಸೂದೆಯನ್ನು ಮಂಡಿಸಿದ್ದು, ಇದಕ್ಕೆ ವಿಪಕ್ಷಗಳ ತೀವ್ರ ವಿರೋಧ ವ್ಯಕ್ತವಾಯಿತು. ಆದರೆ, ಕೇಂದ್ರ ಸರ್ಕಾರ ಈ ಮಸೂದೆಯ ಅಂತಿಮ ಸ್ವರೂಪದೊಂದಿಗೆ ‘ಉಮ್ಮೀದ್ ಬಿಲ್’ ಎಂಬ ಹೆಸರನ್ನು ನೀಡಲು ನಿರ್ಧರಿಸಿದೆ.

ವಕ್ಫ್ ಆಸ್ತಿಗಳ ನಿರ್ವಹಣೆಗೆ ಹೊಸ ನಿಯಮ:

ಈ ಮಸೂದೆ ಜಾರಿಗೆ ಬಂದರೆ, ಮುಸ್ಲಿಂ ಧಾರ್ಮಿಕ ದತ್ತಿ ಆಸ್ತಿಗಳನ್ನು ನಿರ್ವಹಿಸುವ ನಿಯಮಗಳಲ್ಲಿ ಸ್ಪಷ್ಟತೆ ಬರಲಿದೆ. ದೇಶದಾದ್ಯಂತ ಸುಮಾರು 8.72 ಲಕ್ಷ ವಕ್ಫ್ ಆಸ್ತಿಗಳಿದ್ದು, ಈಗಾಗಲೇ 10,000ಕ್ಕೂ ಹೆಚ್ಚು ವಿವಾದಿತ ಪ್ರಕರಣಗಳ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಲಾಗಿದೆ. ರೈಲ್ವೆ ಮತ್ತು ಸೇನೆಯ ಬಳಿಕ ಭಾರತದಲ್ಲಿ ಹೆಚ್ಚು ಭೂ ಸಂಪತ್ತನ್ನು ಹೊಂದಿರುವ ವಕ್ಫ್ ಬೋರ್ಡ್ ಮೇಲಿನ ನಿಯಂತ್ರಣವನ್ನು ಸುಧಾರಿಸುವತ್ತ ಸರ್ಕಾರ ಚಿಂತನೆ ನಡೆಸಿದೆ.

ರಾಜ್ಯಸಭೆಯಲ್ಲೂ ಮಸೂದೆ ಅಂಗೀಕಾರ ಖಚಿತ?

ಈಗ ರಾಜ್ಯಸಭೆಯಲ್ಲಿ ಈ ಮಸೂದೆ ಮಂಡನೆಯಾಗಲಿದ್ದು, ಅಲ್ಲಿಯೂ ತೀವ್ರ ಚರ್ಚೆ ನಿರೀಕ್ಷಿಸಲಾಗಿದೆ. ರಾಜ್ಯಸಭೆಯಲ್ಲಿ ಒಟ್ಟು 245 ಸ್ಥಾನಗಳಿದ್ದರೂ, 9 ಸ್ಥಾನಗಳು ಖಾಲಿಯಾಗಿದೆ. ಹೀಗಾಗಿ, 236 ಸದಸ್ಯರ ಬಲವಿರುವ ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರಕ್ಕೆ ಕನಿಷ್ಟ 118 ಮತಗಳ ಅಗತ್ಯವಿದೆ. ಆದರೆ, ಬಿಜೆಪಿ ನೇತೃತ್ವದ ಎನ್‌ಡಿಎ (NDA) ಮೈತ್ರಿಕೂಟ 126 ಸದಸ್ಯರ ಬಲ ಹೊಂದಿರುವುದರಿಂದ, ರಾಜ್ಯಸಭೆಯಲ್ಲೂ ಮಸೂದೆ ಪಾಸ್ ಆಗುವುದು ಬಹುತೇಕ ಖಚಿತವಾಗಿದೆ.

ಇಂದು ರಾಜ್ಯಸಭೆಯಲ್ಲಿ ಮುಂದುವರಿಯುವ ಚರ್ಚೆ;

ಲೋಕಸಭೆಯಲ್ಲಿ ಮಸೂದೆ ಅಂಗೀಕಾರಗೊಂಡಿದ್ದರಿಂದ ಬಿಜೆಪಿ ನಾಯಕರು ಹರ್ಷ ವ್ಯಕ್ತಪಡಿಸಿದ್ದು, ಇಂದು ರಾಜ್ಯಸಭೆಯಲ್ಲಿ ಮತ್ತಷ್ಟು ಚರ್ಚೆ, ಆಕ್ರೋಶ, ತೀವ್ರ ಪ್ರತಿರೋಧ ಎದುರಾಗಬಹುದು. ರಾಜಕೀಯ ವಲಯದಲ್ಲಿ ಈ ಮಸೂದೆಯ ಪರಿಣಾಮಗಳ ಬಗ್ಗೆ ಉತ್ಸುಕತೆಯಿದೆ.