ಹಾಸನ: ದಕ್ಷಿಣ ಭಾರತದ ನಾಲ್ಕು ರಾಜ್ಯಗಳ ವ್ಯಾಪ್ತಿಯಲ್ಲಿ ಬಹುಸಂಖ್ಯಾತರಾಗಿರುವ ವೀರಶೈವ-ಲಿಂಗಾಯತ ಸಮುದಾಯಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಲ್ಲಿ ಸಮರ್ಪಕ ಪ್ರಾತಿನಿಧ್ಯ, ಅಧಿಕಾರ ದೊರೆಯುತ್ತಿಲ್ಲ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸಾದರನಹಳ್ಳಿ ನಟರಾಜ್ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ತಣ್ಣೀರುಹಳ್ಳ ಮಠದ ಸಭಾಂಗಣದಲ್ಲಿ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಜಿಲ್ಲಾ ನೂತನ ಕಚೇರಿ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಬಹುಸಂಖ್ಯಾತ ವೀರಶೈವ-ಲಿಂಗಾಯತ ಸಮಾಜ ರಾಜಕೀಯ ಸ್ಥಾನಮಾನದಿಂದ ವಂಚಿತವಾಗುತ್ತಿದೆ. ಇದಕ್ಕೆ ನಮ್ಮಲ್ಲಿ ಸಂಘಟನೆ ಇಲ್ಲದಿರುವುದೇ ಕಾರಣವಾಗಿದೆ. ಈ ಕೊರತೆ ನೀಗಲು ಮಹಾಸಭಾದ ರಾಜ್ಯಾಧ್ಯಕ್ಷ ಶಂಕರ್ ಬಿದರಿ ಅವರು ಸಮುದಾಯದ ಪ್ರತಿ ಮನೆ ಮನೆಯಲ್ಲೂ ಮಹಾಸಭಾ ಸದಸ್ಯತ್ವ ಹೊಂದುವಂತೆ ಮಾಡಬೇಕು ಎನ್ನುವ ಗುರಿ ಹೊಂದಿದ್ದಾರೆ.
ಹಾಸನ ಜಿಲ್ಲೆಯಲ್ಲಿ ಸಮುದಾಯ ನಾಲ್ಕು ಲಕ್ಷ ಜನಸಂಖ್ಯೆ ಹೊಂದಿದೆ. ಆದರೆ ಮಹಾಸಭಾ ಸದಸ್ಯರ ಸಂಖ್ಯೆ ಕೇವಲ 8466 ಮಾತ್ರವೇ ಇದೆ. 2026ರ ವೇಳೆಗೆ ಪ್ರತಿ ತಾಲೂಕಿನಲ್ಲಿಯೂ ಕನಿಷ್ಠ 10 ಸಾವಿರ ಸದಸ್ಯರನ್ನು ನೋಂದಣಿ ಮಾಡಿಸಬೇಕು. ಈ ಬಗ್ಗೆ ತಾಲ್ಲೂಕು ಘಟಕಗಳ ಅಧ್ಯಕ್ಷರು ಕಾರ್ಯಪ್ರವೃತ್ತರಾಗಬೇಕು.
ಸಂಘಟನೆಗೆ ಒತ್ತು ನೀಡುವ ದಿಸೆಯಲ್ಲಿ ಪ್ರತಿ ತಾಲ್ಲೂಕು ಕೇಂದ್ರದಲ್ಲಿ ಈ ಬಾರಿ ಬಸವ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಬೇಕು ಎಂದರು.
ರಾಜ್ಯ ಸರ್ಕಾರ ಇತ್ತೀಚಿನ ದಿನಗಳಲ್ಲಿ ವೀರಶೈವ-ಲಿಂಗಾಯತ ಸಮಾಜವನ್ನು ರಾಜಕೀಯವಾಗಿ ಮುಗಿಸುವ ಉದ್ದೇಶದಿಂದ ಜಾತಿ ಗಣತಿಯನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು.
ಸಮುದಾಯದ ಎಲ್ಲರೂ ಸಂಘಟನೆಗೆ ಒತ್ತು ನೀಡಿದರೆ ಮಾತ್ರ ಇಂತಹ ದುಷ್ಟ ಯತ್ನಗಳಿಂದ ಸಮಾಜವನ್ನು ಕಾಪಾಡಬಹುದು ಎಂದರು.
ಜಿಲ್ಲಾ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ನವಿಲೆ ಪರಮೇಶ್, ಮಾತನಾಡಿ, ಜಿಲ್ಲೆಯಲ್ಲಿ ಮಹಾಸಭಾ ತನ್ನ ಛಾಪು ಮೂಡಿಸುವ ಜತೆಗೆ ಸಂಘಟನೆ ಒತ್ತು ನೀಡುತ್ತಾ ಬಂದಿದೆ. ಇಡೀ ಜಿಲ್ಲೆಯ ಎಲ್ಲ ನಾಲ್ಕು ಲಕ್ಷ ಸಮಾಜ ಬಾಂಧವರು ಸದಸ್ಯತ್ವ ನೋಂದಣಿ ಮಾಡಿಕೊಂಡರೆ ಮಾತ್ರ ನಮ್ಮ ಹಕ್ಕುಗಳನ್ನು ಪಡೆಯಲು ಸಾದ್ಯವಾಗುತ್ತದೆ ಎಂದರು.
ಈ ನಿಟ್ಟಿನಲ್ಲಿ ಜಿಲ್ಲಾ ಸಮಿತಿಯ ಅಭಿಪ್ರಾಯದಿಂದ ತಣ್ಣೀರುಹಳ್ಳ ಮಠದ ಸಮೀಪದಲ್ಲಿಯೇ ಅಖಿಲ ಭಾರತ ವೀರಶೈವ-ಲಿಂಗಾಯಿತ ಮಹಾಸಭಾ ಜಿಲ್ಲಾ ಕಾರ್ಯಾಲಯವನ್ನು ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಸಮಾಜದ ಸಂಘಟನಾತ್ಮಕ ದೃಷ್ಟಿಯಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಉದ್ದೇಶವಿದೆ ಎಂದರು.
ಅರಕಲಗೂಡು ದೊಡ್ಡಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಹಾಸನ ತಣ್ಣೀರುಹಳ್ಳ ಮಠದ ಶ್ರೀ ವಿಜಯಕುಮಾರ ಸ್ವಾಮೀಜಿ. ಮಾಜಿ ಶಾಸಕ ಕೆ.ಎಸ್.ಲಿಂಗೇಶ್, ಪುಷ್ಪಗಿರಿ ಮಹಾಸಂಸ್ಥಾನ ಮಠದ ಕಾರ್ಯದರ್ಶಿ ಗ್ರಾನೈಟ್ ರಾಜಶೇಖರ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಜೆಡಿಎಸ್ ಮುಖಂಡ ಎನ್.ಆರ್.ಸಂತೋಷ, ಮಹಾಸಭಾ ರಾಜ್ಯ ಉಪಾಧ್ಯಕ್ಷೆ ರಾಜೇಶ್ವರಿ, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಮುಕ್ತಾಂಬ, ರಾಷ್ಟ್ರೀಯ ಘಟಕ ಉಪಾಧ್ಯಕ್ಷೆ ಬಿ.ಕೆ.ಚಂದ್ರಕಲಾ, ರಾಜ್ಯ ಯುವ ಘಟಕದ
ಮನೋಹರ ಅಬ್ಬಿಗೆರೆ ಮಾಜಿ, ಕೆ. ಎಸ್.ಅರ್.ಟಿ.ಸಿ ಮಾಜಿ ಉಪಾಧ್ಯಕ್ಷ ಸೀಗೆ ಈಶ್ವರಪ್ಪ, ಹಾಸನ ತಾಲ್ಲೂಕು ಘಟಕದ ಅಧ್ಯಕ್ಷ ಕಟ್ಟಾಯ ಶಿವಕುಮಾರ್.ಬೇಲೂರಿನ ಬಸವರಾಜ, ಅಲೂರಿನ ಅಜಿತ್, ಬಿ.ಎಂ.ರವಿಕುಮಾರ್, ವಿಕ್ರಮ್ ಕೌರಿ ಸಮಿತಿ ನಿರ್ದೇಶಕಿ ಗೀತಾ ಶಿವರಾಜ್, ಹಾಸನ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಮಮತಾ ಪಾಟೀಲ್ ಮುಂತಾದವರಿದ್ದರು.
ಹಾಸನ ಜಿಲ್ಲೆಯಲ್ಲಿ ವೀರಶೈವ-ಲಿಂಗಾಯತ ಸಮಾಜಕ್ಕೆ ರಾಜಕೀಯ ಸ್ಥಾನಮಾನ ದಿನದಿಂದ ದಿನಕ್ಕೆ ದೂರವಾಗುತ್ತಿದೆ. ಜಿಲ್ಲೆಯ ಎಲ್ಲಾ ಸ್ವಾಮೀಜಿಗಳು ಸಮಾಜದ ಮುಖಂಡರ ಸಮುಖದಲ್ಲಿ ಬೃಹತ್ ಸಮಾವೇಶ ಆಯೋಜಿಸಿ ಸ್ಪಷ್ಟ ಸಂದೇಶ ನೀಡಬೇಕು. ಇಲ್ಲವಾದರೆ ನಮಗೆ ಯಾವುದೇ ಸ್ಥಾನ ಮಾನ ಸಿಗುವುದಿಲ್ಲ, ಇನ್ನು ಮುಂದಾದರೂ ರಾಜಕೀಯ ಸ್ಥಾನಮಾನ ಕಿತ್ತುಕೊಳ್ಳಬೇಕು.
-ಎನ್.ಆರ್. ಸಂತೋಷ್