ಹಾಸನ: ಲೋಕಸಭಾ ಸದಸ್ಯ ಶ್ರೇಯಸ್ ಎಂ. ಪಟೇಲ್ ಅವರ ಅಧ್ಯಕ್ಷತೆಯಲ್ಲಿ ಹಾಗೂ ಹಿರಿಯ ಮಹಾಪ್ರಬಂಧಕ ದಿಗಂಬರ ಕುಮಾರ್ ಉಪಸ್ಥಿತಿಯಲ್ಲಿ ಹಾಸನ ಬಿಎಸ್‌ಎನ್‌ಎಲ್ ಭವನದ ಸಭಾಂಗಣದಲ್ಲಿ ತುಮಕೂರು ವ್ಯಾಪಾರ ವಲಯ ದೂರವಾಣಿ ಸಲಹಾ ಸಮಿತಿ ಸಭೆ ಜರುಗಿತು.
ಸಭೆಯಲ್ಲಿ ವಲಯದ ಪ್ರಮುಖರು, ಬಿಎಸ್‌ಎನ್‌ಎಲ್ ಅಧಿಕಾರಿಗಳು ಭಾಗವಹಿಸಿದ್ದರು. ವ್ಯಾಪಾರ ಅಭಿವೃದ್ಧಿ, ಸಂಪರ್ಕ ಸುಧಾರಣೆ ಹಾಗೂ ತಂತ್ರಜ್ಞಾನ ಪರಿಷ್ಕರಣೆ ಬಗ್ಗೆ ಚರ್ಚೆ ನಡೆಸಿದರು.
ಹಾಸನ ಜಿಲ್ಲೆಯಲ್ಲಿ ಬಿಎಸ್ಎನ್ಎಲ್ ಸೇವೆ ಗ್ರಾಮಾಂತರ ಪ್ರದೇಶದ ಪ್ರತಿ ಮೂಲೆಯನ್ನೂ ತಲುಪಲು ಸಂಪರ್ಕ ಜಾಲ ಬಲಪಡಿಸುವಂತೆ ಸಂಸದ ಶ್ರೇಯಸ್ ಅಧಿಕಾರಿಗಳಿಗೆ ಸೂಚಿದರು.
ಬಿಎಸ್ಎನ್ಎಲ್ ನೆಟ್ವರ್ಕ್ ಸಮಸ್ಯೆ ಸಕಲೇಶಪುರ, ಚನ್ನರಾಯಪಟ್ಟಣ, ಹಳ್ಳಿಮೈಸೂರು ಭಾಗಗಳನ್ನು ಹೆಚ್ಚಾಗಿ ಕಾಡುತ್ತಿದೆ. ಅಲ್ಲಿನ ನೆಟ್ವರ್ಕ್ ತೊಂದರೆ ಬಗೆಹರಿಸಬೇಕು. ವಿದ್ಯಾರ್ಥಿಗಳಿಗೆ ಆನ್ ಲೈನ್ ಕಲಿಕೆಗೆ ಅಗತ್ಯವಾದ ಡೇಟಾ ಸೇವೆ ಉತ್ತಮಗೊಳ್ಳಬೇಕು ಎಂದರು.
ಬಿ ಎಸ್ ಎನ್ ಎಲ್ ಪ್ರಮುಖ ಸೇವೆಗಳ ಬಗ್ಗೆ ಜನರಿಗೆ ಮಾಹಿತಿ ಇಲ್ಲ. ಟ್ಯಾರಿಫ್ ಪ್ಲಾನ್ ಬಗ್ಗೆಯೂ ಹೆಚ್ಚು ಪ್ರಚಾರದ ಅಗತ್ಯವಿದೆ ಎಂದು ಅವರು ಅಭಿಪ್ರಾಯ ಪಟ್ಟರು.
ಹಿಂದೆ ಜನರು ನೀರು, ರಸ್ತೆ, ಇತರೆ ಮೂಲಭೂತ ಸೌಕರ್ಯಗಳಿಗಾಗಿ ಪ್ರತಿಭಟನೆ ಮಾಡುತ್ತಿದ್ದರು. ಈಗ ತಂತ್ರಜ್ಞಾನ ಬೆಳೆದಂತೆ ಇಂಟರ್ನೆಟ್ ಗಾಗಿ ಪ್ರತಿಭಟನೆ ನಡೆಸುತ್ತಾರೆ. ಜನರ ಮೂಲ ಅಗತ್ಯಗಳ ಪಟ್ಟಿಯಲ್ಲಿ ಈಗ ಸಂಪರ್ಕ ಮಾಧ್ಯಮವೂ ಸೇರಿರುವುದನ್ನು ಅರಿತು ಸಮಸ್ಯೆಗಳಿಗೆ ಸ್ಪಂದಿಸಿ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಬಿಎಸ್ಎನ್ಎಲ್ ಉಪ ಮಹಾಪ್ರಬಂಧಕರು ಸೇರಿದಂತೆ ಹಲವು ಅಧಿಕಾರಿಗಳು ಭಾಗವಹಿಸಿದ್ದರು.