ತಬ್ಬಲಿ ಮಗನನ್ನೂ ಬಿಡಲಿಲ್ಲ ಹಾಳು ವಿಧಿ; ಶಾಲೆ-ಊರಿನವರ ಅಚ್ಚುಮೆಚ್ಚಿನ ಬಾಲಕ ಸ್ನೇಹಿತ್ ಹಠಾತ್ ಸಾವಿಗೆ ಗ್ರಾಮವೇ ಕಣ್ಣೀರು

-ಕೆ.ಜಿ.ಎಸ್.

ಹಾಸನ: ಆಲೂರು ತಾಲೂಕಿನ ಚನ್ನಾಪುರ ಗ್ರಾಮದ ೬ನೇ ತರಗತಿ ವಿದ್ಯಾರ್ಥಿ ಸ್ನೇಹಿತ್, ಹಠಾತ್ತನೇ ಹೃದಯಾಘಾತದಿಂದ ಇಹಲೋಕ ತ್ಯಜಿಸಿರುವುದು, ಹೆತ್ತ ಕರುಳಿಗೆ ಮಾತ್ರವಲ್ಲದೆ ಇಡೀ ಊರಿನ ತುಂಬೆಲ್ಲಾ ದುಃಖ ಆವರಿಸಿದೆ. ಪ್ರತಿಯೊಬ್ಬರೂ ಕಣ್ಣ ಮುಂದಿನ ಹುಡುಗ, ಡಿಢೀರ್ ಕಣ್ಮರೆಯಾಗಬಾರದಿತ್ತು ಎಂದು ಮಮ್ಮಲ ಮರುತ್ತಿದ್ದಾರೆ.

ಸ್ನೇಹಿತ್ ನೋಡಲು ಮುದ್ದು ಮುದ್ದಾಗಿದ್ದ. ಆದರೆ ಆತನ ಹಿನ್ನೆಲೆ ಎಲ್ಲರಂತಿರಲಿಲ್ಲ. ತಂದೆ ಪುನೀತ್ ಅನಾರೋಗ್ಯದಿಂದ ತೀರಿ ಕೊಂಡಿದ್ದಾರೆ. ತಂದೆ ಇಲ್ಲದ ತಬ್ಬಲಿ, ತಾಯಿ ಕಾವ್ಯಶ್ರೀ ಹಾಗೂ ಅಜ್ಜಿ-ತಾತನ ಆಸರೆಯಲ್ಲಿ ಸ್ನೇಹಿತ್ ಮತ್ತು ಈತನ ಅಣ್ಣ ಸಂಜಯ್, ಬದುಕು ರೂಪಿಸಿಕೊಳ್ಳುತ್ತಿದ್ದರು.ತಾಯಿ ಕೂಲಿ ಕೆಲಸಕ್ಕೆ ಹೋದರೆ, ತಾತ ನೀರುಗಂಟಿಯಾಗಿರುವುದರಿAದ ಹೇಗೋ ಜೀವನ ಬಂಡಿ ಸಾಗುತ್ತಿತ್ತು.

ಸ್ನೇಹಿತ್ ಚಿಕ್ಕವನಾದರೂ ತುಂಬಾ ಲವಲವಿಕೆಯ ಹುಡುಗ.
ಒಮ್ಮೆ ಮನೆಯಿಂದ ಹೊರ ಹೋದನೆಂದರೆ ಇಡೀ ಜನರೆಲ್ಲರನ್ನೂ ಮಾತನಾಡಿಸಿಕೊಂಡು ಬರುತ್ತಿದ್ದ. ಓದಿನಲ್ಲೂ ಮುಂದಿದ್ದ ಸ್ನೇಹಿತ್, ಊರಿನಲ್ಲಿ ಹಾಗೂ ಶಾಲೆಯಲ್ಲೂ ಪ್ರತಿಯೊಬ್ಬರಿಗೂ ಅಚ್ಚುಮೆಚ್ಚಾಗಿದ್ದ.

ಬಡ ಹುಡುಗ ಎಂಬ ಗುರು ಹಿರಿಯರ ಆಶೀರ್ವಾದದಿಂದಲೋ ಏನೋ ಸ್ನೇಹಿತ್ ಒಮ್ಮೆಯೂ ನನಗೆ ಉಷಾರಿಲ್ಲ ಎಂದು ಹಾಸಿಗೆ ಹಿಡಿದವನಲ್ಲ. ಆಸ್ಪತ್ರೆ ಮೆಟ್ಟಿಲು ಹತ್ತಿದವನೇ ಅಲ್ಲ.
ಕಳೆದ ಗುರುವಾರ ಪ್ರತಿಭಾ ಕಾರಂಜಿ ಸ್ಪರ್ಧೆಗಾಗಿ ಚನ್ನಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪರವಾಗಿ ಆಲೂರಿಗೆ ಹೋಗಿದ್ದ.

ಸ್ಪರ್ಧೆ ಮುಗಿಯುವುದರೊಳಗೆ ಸಂಜೆಯಾದ ಕಾರಣ, ಆಯಾಸದಿಂದ ಶುಕ್ರವಾರ ಶಾಲೆಗೆ ಹೋಗಿರಲಿಲ್ಲ. ನೀನೂ ಇವತ್ತು ಸ್ಕೂಲಿಗೆ ಹೋಗ ಬೇಡ ಅಣ್ಣ ಎಂದಿದ್ದರಿAದ ಸಂಜಯ್ ಸಹ ಮನೆಯಲ್ಲೇ ಉಳಿದಿದ್ದ. ಸ್ನೇಹಿತ್ ೬ನೇ ತರಗತಿಯಾದರೆ, ಸಂಜಯ್ ೭ ನೇ ತರಗತಿ. ಸಹೋದರರಿಬ್ಬರು ಒಂದೇ ಶಾಲೆಯಲ್ಲಿ ಓದುತ್ತಿದ್ದರು. ಶುಕ್ರವಾರ ಬೆಳಗ್ಗೆ ಕಾವ್ಯಶ್ರೀ ಮಕ್ಕಳು, ಹಿರಿಯರಿಗೆ ತಿಂಡಿ ಮಾಡಿಟ್ಟು ಎಂದಿನಂತೆ ಕೆಲಸಕ್ಕೆ ಹೋಗಿದ್ದರು.

ತಾತನ ಕೆಲಸ ತಾನೇ ಮಾಡಿದ್ದ: ಏತನ್ಮಧ್ಯೆ ತಾತನಿಗೆ ಹುಷಾರಿಲ್ಲದ ಕಾರಣ, ಬೆಳಗ್ಗೆ ಸ್ನೇಹಿತನೇ ಹೋಗಿ ನೀರುಗಂಟಿ ಕೆಲಸವನ್ನು ತಾನೇ ಮಾಡಿ ಬಂದಿದ್ದ. ಬಂದವನೇ ತಾಯಿ ಮಾಡಿಟ್ಟು ಹೋಗಿದ್ದ ಕಡುಬು ತಿಂದು ಮನೆಯಲ್ಲೇ ಇರೋಣ ಎಂದುಕೊಂಡಿದ್ದ. ಅಣ್ಣ ಸಂಜಯ್ ಆಟ ಆಡೋಣ ಬಾ ಎಂದು ಕರೆದ. ಆದರೆ ನಾನು ಬರೋದಿಲ್ಲ. ನೀನು ಹೋಗಿ ಬಾ ಎಂದು ಹೇಳಿ ಕುರ್ಚಿ ಮೇಲೆ ಕುಳಿತು ಟಿವಿ ನೋಡುತ್ತಿದ್ದ.

ಪಾಪ, ಹಾಳು ವಿಧಿಗೆ ಸ್ನೇಹಿತನ ಮೇಲೆ ಅದೇನೆನ್ನಿಸಿತೋ, ಹಠಾತ್ತನೇ ಬಾಲಕನ ಹೃದಯದ ಬಡಿತವನ್ನೇ ನಿಲ್ಲಿಸಿ ಬಿಟ್ಟಿತು.
ಏನಾಯಿತು ಎಂದು ಕೊಳ್ಳುವಲ್ಲಿ ಸ್ನೇಹಿತ್, ಕುಸಿದು ಬಿದ್ದಿದ್ದ.
ಇದನ್ನು ಕಂಡ ಮನೆಯವರು ಹಾಗೂ ನೆರೆ ಹೊರೆಯವರು ಕೂಡಲೇ ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು.

ಆ ವೇಳೆಗಾಗಲೇ ಸ್ನೇಹಿತ್‌ನ ಪ್ರಾಣಪಕ್ಷಿ ಹಾರಿಹೋಗಿತ್ತು. ಆದರೂ ವೈದ್ಯರು ಎದೆಭಾಗವನ್ನು ಒತ್ತಿ ಸ್ನೇಹಿತ್‌ನನ್ನು ಬದುಕಿಸಲು ಸಾಕಷ್ಟು ಪ್ರಯತ್ನ ಮಾಡಿದರೂ, ಪ್ರಯೋಜನ ಆಗಲಿಲ್ಲ. ಆದರೂ ಮಗ ಸತ್ತೇ ಇಲ್ಲ ಎಂದುಕೊಂಡ ಸಂಬಂಧಿಕರು, ಆಲೂರು ತಾಲೂಕು ಆಸ್ಪತ್ರೆಗೂ ಕರೆ ತಂದರು. ಅಲ್ಲಿ ಸ್ನೇಹಿತನ ಉಸಿರು ಶಾಶ್ವತವಾಗಿ ನಿಂತಿರುವುದನ್ನು ಖಚಿತ ಪಡಿಸಿದರು.

ಸದಾ ಮನೆ, ಊರ ತುಂಬೆಲ್ಲಾ ಓಡಾಡಿಕೊಂಡಿದ್ದ ಸ್ನೇಹಿತ ಇನ್ನಿಲ್ಲ ಎಂಬ ನೋವು ಎಲ್ಲರನ್ನೂ ಬಾಧಿಸುತ್ತಿದೆ. ಬೇಸರದ ಸಂಗತಿ ಎಂದರೆ ಕಾವ್ಯಶ್ರೀ ಪ್ರೀತಿಸಿ ಪುನೀತ್‌ನನ್ನು ಮದುವೆಯಾದರು. ಆದರೆ ಬಾಳ ಪಯಣದ ಅರ್ಧದಲ್ಲೇ ಪುನೀತ್, ಕಾವ್ಯಶ್ರೀಯನ್ನು ಬಿಟ್ಟು ಕಣ್ಮರೆಯಾದರು. ಆ ನೋವಿನ ಮಧ್ಯೆಯೇ ಇದೀಗ ನೆಚ್ಚಿನ ಕಿರಿಯ ಮಗನನ್ನು ಕಳೆದುಕೊಂಡು ಕಾವ್ಯಶ್ರೀ ಅಕ್ಷರಶಃ ಕಂಗಾಲಾಗಿದ್ದಾಳೆ. ಕೇವಲ ೧೧ ವರ್ಷಕ್ಕೇ ಹೃದಯಾಘಾತದಿಂದ ಸ್ನೇಹಿತ್ ಇಹಲೋಕ ತ್ಯಜಿಸಿರುವುದು ನೋವು ಮಾತ್ರವಲ್ಲದೆ ಆತಂಕವನ್ನೂ ತರಿಸಿದೆ.