ಆಲೂರು: ತಾಲೂಕಿನ ಚೌಲ್ಗೆರೆ ಸಮೀಪ ರಾಷ್ಟ್ರೀಯ ಹೆದ್ದಾರಿ 75ರಲ್ಲಿನ ಸುಂಕ ವಸೂಲಿ ಕೇಂದ್ರ ಕಾರ್ಯಾರಂಭ ಮಾಡಿದ್ದು, ಟೋಲ್ ಸಂಗ್ರಹ ವಿರೋಧಿಸಿ ವಾಹನ ಸವಾರರು, ಸ್ಥಳೀಯರು ಹಾಗೂ ವಿವಿಧ ಕನ್ನಡಪರ ಸಂಘಟನೆ ಮುಖಂಡರು ಇಂದು ಪ್ರತಿಭಟನೆ ನಡೆಸಿದರು.
ಬೆಳಿಗ್ಗೆ 8 ಗಂಟೆಯಿಂದ ಸುಂಕ ವಸೂಲಾತಿ ಶುರುವಾಗಿದ್ದು, ಹಾಸನ-ಮಂಗಳೂರು, ಮಂಗಳೂರು-ಬೆಂಗಳೂರು ಕಡೆಗೆ ತೆರಳುವವರ ಜೊತೆಗೆ ಸ್ಥಳೀಯರೂ ಸುಂಕಕಟ್ಟಿ ಓಡಾಡಬೇಕಿದೆ. ಆದರೆ ರಸ್ತೆ ಕಾಮಗಾರಿ ಸಂಪೂರ್ಣ ಮುಗಿಯದೇ ಸುಂಕ ವಸೂಲಿ ಮಾಡುತ್ತಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಸ್ಥಳೀಯರು ಹಾಗೂ ನಾನಾ ಸಂಘಟನೆ ಮುಖಂಡರು, ಇಂದು ಟೋಲ್ ಬಳಿ ಪ್ರತಿಭಟನೆ ನಡೆಸಿದರು.
ಈ ವೇಳೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕೆಲಕಾಲ ಎನ್‌ಹೆಚ್-75 ತಡೆದು ಪ್ರತಿಭಟನೆ ನಡೆಸಿ ಸುಂಕ ವಸೂಲಿ ನಿಲ್ಲಿಸಬೇಕೆಂದು ಒತ್ತಾಯಿಸಿದರು.
ಕಡಿಮೆ ಅಂತರ-ದುಬಾರಿ ಶುಲ್ಕ:
ಒಂದೆಡೆ ಹೆದ್ದಾರಿ ಅಗಲೀಕರಣ ಕಾಮಗಾರಿ ಮುಗಿದಿಲ್ಲ, ಆಗಿರುವ ಕಾಮಗಾರಿ ಕಳಪೆ ಆಗಿದೆ. ಸಕಲೇಶಪುರ-ಮಾರನಹಳ್ಳಿವರೆಗೂ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಆದರೂ ಟೋಲ್ ಸಂಗ್ರಹ ಮಾಡುವುದು ಎಷ್ಟು ಸರಿ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.
ನಿಯಮಾವಳಿ ಪ್ರಕಾರ ಪ್ರತಿ 50-60 ಕಿಮೀ ಅಂತರದಲ್ಲಿ ಸುಂಕ ವಸೂಲಿ ಕೇಂದ್ರ ಇರಬೇಕು. ಆದರೆ ಹಾಲಿ ಇರುವ ಶಾಂತಿಗ್ರಾಮ ಸುಂಕ ವಸೂಲಿ ಕೇಂದ್ರಕ್ಕೂ ಇಲ್ಲಿಗೂ ಕೇವಲ 30 ಕಿಮೀ. ದೂರ ಇದೆ. ನಿಯಮ ಗಾಳಿಗೆ ತೂರಿ ಟೋಲ್ ಸಂಗ್ರಹ ಮಾಡಲಾಗುತ್ತಿದೆ. ಟೋಲ್ ಅಂತರ ಕಡಿಮೆ ಇದ್ದರೂ ದುಬಾರಿ ಶುಲ್ಕ ನಿಗದಿ ಪಡಿಸಲಾಗಿದೆ, ಇದು ಹೊರೆಯಾಗಲಿದೆ ಎಂದು ಆಕ್ರೋಶ ಹೊರ ಹಾಕಿದರು.
ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ NHAI ಯೋಜನಾ ನಿರ್ದೇಶಕ ಪ್ರವೀಣ್‌ಕುಮಾರ್ ಸ್ಥಳಕ್ಕೆ ಆಗಮಿಸಿದರು. ಕೂಡಲೇ ಶುಂಕ ವಸೂಲಿ ನಿಲ್ಲಿಸಿ ಎಂದು ಅವರನ್ನು ಆಗ್ರಹಿಸಿ ಪ್ರತಿಭಟನಾಕಾರರು ಪಟ್ಟು ಹಿಡಿದರು.
ಈ ವೇಳೆ ಮಾತನಾಡಿದ ಪ್ರವೀಣ್‌ಕುಮಾರ್, ಟೋಲ್ ಸಂಗ್ರಹ ನಿಲ್ಲಿಸಲು ಸಾಧ್ಯವಿಲ್ಲ ಎಂದರು. ಇದರಿಂದ ಪ್ರತಿಭಟನಾಕಾರರು ಮತ್ತಷ್ಟು ರೊಚ್ಚಿಗೇಳುತ್ತಿದ್ದಂತೆಯೇ ಪಿಡಿ ಅಲ್ಲಿಂದ ತೆರಳಿದರು. ಮತ್ತೆ ಆಗಮನಿಸಿದ ಪ್ರವೀಣ್‌ಕುಮಾರ್ ಪ್ರತಿಭಟನಾಕಾರರ ಮನವೊಲಿಸುವ ಪ್ರಯತ್ನ ಮಾಡಿದರು.
ಯಾವಾಗ ಪ್ರತಿಭಟನೆ ತೀವ್ರಗೊಂಡಿತೋ ಆಗ ಪ್ರವೀಣ್ ಕುಮಾರ್ ಜತೆಗೆ ಎಸ್ಪಿ ಮಹಮದ್ ಸುಜೀತಾ, ಸಕಲೇಶಪುರ ಎಸಿ ಡಾ.ಶ್ರುತಿ ಆಗಮಿಸಿ ಪ್ರತಿಭಟನಾಕಾರರ ಮನವೊಲಿಕೆಯಲ್ಲಿ ತೊಡಗಿದರು. ಕಡೆಗೂ ಪ್ರತಿಭಟನಾಕಾರರ ಮನವೊಲಿಸುವಲ್ಲಿ ಅಧಿಕಾರಿಗಳು ಯಶಸ್ವಿಯಾದರು. ಬಳಿಕ ತಾತ್ಕಾಲಿಕವಾಗಿ ಪ್ರತಿಭಟನೆ ವಾಪಸ್ ಪಡೆಯಲಾಯಿತು.
ನಾಳೆಯ ಸಭೆಯಲ್ಲಿ ತೀರ್ಮಾನ:
ಈ ವೇಳೆ ಮಾತನಾಡಿದ ಎಸಿ ಶ್ರುತಿ, ಇಂದಿನಿಂದ ಸುಂಕ ವಸೂಲಾತಿ ಆರಂಭ ಆಗಲಿದೆ. ಪ್ರತಿಭಟನೆ ವಾಪಸ್ ಪಡೆದಿದ್ದಾರೆ. ನಾಳೆ ಸಭೆ ನಡೆಯುವವರೆಗೂ ಸ್ಥಳೀಯರಿಂದ ಸುಂಕ ವಸೂಲಿ ಮಾಡಲ್ಲ. ಬೆಳಿಗ್ಗೆ 11 ಗಂಟೆಗೆ ಡಿಸಿ ಕಚೇರಿಯಲ್ಲಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಯೋಜನಾ ನಿರ್ದೇಶಕರು, ಸ್ಥಳೀಯರು ಭಾಗಿಯಾಗಲಿದ್ದಾರೆ ಎಂದರು. ಸಭೆಯಲ್ಲಿ ಕ್ಯಾಬಿನೆಟ್ ತೀರ್ಮಾನದ ಬಗ್ಗೆ ತಿಳಿಸಲಾಗುವುದು. ಮುಂದೇನು ಎಂಬ ಬಗ್ಗೆ ನಾಳೆ ತೀರ್ಮಾನ ಆಗಲಿದೆ ಎಂದರು.
ಎಸಿ ಹಾಗೂ ಪಿಡಿ ಮನವಿಗೆ ಒಪ್ಪಿ ಪ್ರತಿಭಟನೆ ಹಿಂಪಡೆದಿದ್ದೇವೆ. ಯಾವುದೇ ಕಾರಣಕ್ಕೂ ಸ್ಥಳೀಯರಿಂದ ಸುಂಕ ವಸೂಲಿ ಮಾಡಬಾರದು. ನಾಳೆ ಡಿಸಿ ಅವರ ಮುಂದೆಯೂ ನಮ್ಮ ಬೇಡಿಕೆ ಇಡುತ್ತೇವೆ. ಇದಕ್ಕೆ ಸ್ಪಂದನೆ ಸಿಗದಿದ್ದರೆ ಮುಂದಿನ ಹೋರಾಟದ ಬಗ್ಗೆ ನಿರ್ಧರಿಸುತ್ತೇವೆ.
-ಸತೀಶ್ ಪಟೇಲ್, ಕರವೇ ಜಿಲ್ಲಾಧ್ಯಕ್ಷ