‘ದಿ ಡಾರ್ಕ್ ವೆಬ್’ ಶೀರ್ಷಿಕೆ ಅನಾವರಣಗೊಳಿಸಿದ ವಸಿಷ್ಠ ಸಿಂಹ

ಹಾಸನ: ಪತ್ರಕರ್ತ ಮಂಜು ಬನವಾಸೆ ಹಾಗೂ ಹೆತ್ತೂರು ನಾಗರಾಜ್ ಎಂಎನ್ ಸಿನಿಮಾಸ್ ಬ್ಯಾನರ್ ನಡಿ ನಿರ್ಮಿಸಿರುವ ಸೈಬರ್ ಕ್ರೈಂ ಕಥಾ ಹಂದರ ಆಧರಿತ ‘ದಿ ಡಾರ್ಕ್ ವೆಬ್’ ಚಲನಚಿತ್ರದ ಶೀರ್ಷಿಕೆಯನ್ನು ನಾಯಕ ನಟ ವಸಿಷ್ಠ ಸಿಂಹ ಶನಿವಾರ ರಾತ್ರಿ ಹಾಸನದ ಪ್ರವಾಸಿ ಮಂದಿರದಲ್ಲಿ ಅನಾವರಣಗೊಳಿಸಿದರು.

ನಂತರ ಮಾತನಾಡಿದ ಅವರು, ನಮ್ಮೂರಿನಲ್ಲಿ ಅದರಲ್ಲೂ ನಮ್ಮೂರಿನ ಪತ್ರಕರ್ತರು ಸೇರಿ ದಿ ಡಾರ್ಕ್ ವೆಬ್ ಸಿನಿಮಾ ನಿರ್ಮಿಸಿದ್ದಾರೆಎನ್ನುವ ಕಾರಣಕ್ಕಾಗಿ ಸಂತೋಷ ಹೆಚ್ಚಾಗಿದೆ.
‘ಜನನಿ ಜನ್ಮಭೂಮಿಶ್ಚ್ ಸ್ವರ್ಗಾದಪಿ ಗರಿಯಸಿ’ ಎಂಬ ಮಾತಿನಂತೆ ನಮ್ಮೂರು ಎಂದರೆ ಬರುವ ಭಾವನೆಯೇ ಬೇರೆ. ನನ್ನೂರು ಹಾಸನ ಎನ್ನುವುದು ಹೆಮ್ಮೆ. ಈಗ ಇಲ್ಲಿಯೂ ಸಾಕಷ್ಟು ಜನರು ಚಿತ್ರೋದ್ಯಮದಲ್ಲಿ ತೊಡಗಿಕೊಂಡಿದ್ದಾರೆ. ಆ ಸಂಖ್ಯೆ ಇನ್ನೂ ಹೆಚ್ಚಬೇಕು ಎಂದರು.

ದಿ ಡಾರ್ಕ್ ವೆಬ್ ಸಿನಿಮಾ ಸೈಬರ್ ಕ್ರೈಮ್ ಆಧರಿಸಿದ ಕತೆ ಹೊಂದಿದೆ. ಇಂದು ಹೊಸ ಥರದ ಅಪರಾಧಗಳು ನಡೆಯುತ್ತಿವೆ. ಅಂತಹ ಕೃತ್ಯಗಳ ಮೇಲೆ ಬೆಳಕು ಚೆಲ್ಲುವ ಯತ್ನ ಈ ಚಿತ್ರತಂಡದಿಂದ ಆಗಿದೆ. ಚಿತ್ರಕ್ಕೆ ಯಶಸ್ಸು ದೊರೆಯಲಿ ಎಂದು ಹಾರೈಸಿದರು.

ಚಿತ್ರದ ನಿರ್ಮಾಪಕ ಮಂಜು ಬನವಾಸೆ ಮಾತನಾಡಿ, ಹಾಸನ ಉತ್ಸಾಹಿ ಪತ್ರಕರ್ತರು ಒಂದು ತಂಡವಾಗಿ ಚಿತ್ರ ನಿರ್ಮಾಣ ಮಾಡಿದ್ದೇವೆ. ನಮ್ಮ ಸಣ್ಣ ಪ್ರಯತ್ನಕ್ಕೆ ವಸಿಷ್ಠ ಸಿಂಹ ಅವರಂತಹ ದೊಡ್ಡ ನಟರಬೆಂಬಲ ದೊರಕಿರುವುದು ಸುಯೋಗ ಎಂದರು.

ಚಿತ್ರದ ನಿರ್ಮಾಪಕ ಹೆತ್ತೂರು ನಾಗರಾಜ್, ನಾಯಕ ನಟ ಚೇತನ್, ಪೋಷಕ ನಟರಾದ ಮಂಜೇಗೌಡ, ಭಾರತೀಶ್, ದಿಗ್ವಿಜಯ ನಾಗರಾಜ್, ಪ್ರಶಾಂತ್, ಹಿರಿಯ ಪತ್ರಕರ್ತರಾದ ಬಾಳ್ಳು ಗೋಪಾಲ್, ಉದಯ್ ಕುಮಾರ್, ರವಿ ನಾಕಲಗೂಡು, ಅತೀಖುರ್ ರೆಹಮಾನ್, ಖುಷ್ವಂತ್, ವೈದ್ಯ ಡಾ.ಸಂತೋಷ್, ವಕೀಲರಾದ ಲಕ್ಷ್ಮಿ ಕಾಂತ್, ಹಾಗೂ ಜಾರ್ಜ್ ವಿಲ್ಸನ್, ನಲ್ಲಪ್ಪ, ಸೇರಿದಂತೆ ಚಲನಚಿತ್ರ ತಂಡ ಹಾಗೂ ಆತ್ಮೀಯರು ಉಪಸ್ಥಿತರಿದ್ದರು.

(ಬಾಕ್ಸ್ ಐಟಂ)
ನಿರ್ದೇಶಕನನ್ನು ಸನ್ಮಾನಿಸಿದ ವಸಿಷ್ಠ!:
ಚಿತ್ರ ತಂಡದ ಅಭಿನಂದನೆ ಸ್ವೀಕರಿಸಿದ ವಸಿಷ್ಠ, ಚಿತ್ರದ ನಿರ್ದೇಶಕ ಕಿರಣ್ ಸ್ವಾಮಿ ಅವರಿಗೆ ಹಾರ ಹಾಕಿ, ಪೇಟ ತೊಡಿಸಿ ಸನ್ಮಾನಿಸಿದರು.
ನನ್ನ‌ ವೃತ್ತಿಬದುಕು ಆರಂಭವಾಗಿದ್ದು ರಾಜಾಹುಲಿ ಸಿನಿಮಾದಿಂದ. ಕಿರಣ ಆ ಸಿನಿಮಾದಲ್ಲಿ ಒಬ್ಬ ಸಹಾಯಕ ನಿರ್ದೇಶಕನಾಗಿದ್ದ ಬಹಳ ವರ್ಷಗಳಿಂದ ಅವನನ್ನು ನೋಡುತ್ತಿದ್ದೇನೆ.ತುಂಬಾ ಪ್ರತಿಭಾವಂತ. ಅಸಿಸ್ಟೆಂಟ್ ಡೈರೆಕ್ಷಗಳ ಜೀವನ, ಬವಣೆಗಳು ಅವರ ಜರ್ನಿ ಬೇರೆ ರೀತಿ ಇರುತ್ತದೆ. ಅವರು ತುಂಬಾ ಶ್ರಮವಹಿಸಿ ಅವರ ಬದುಕು ಕಟ್ಟಿಕೊಳ್ಳಬೇಕು ಎನ್ನುವ ಕಾರಣಕ್ಕಾಗಿ ಅವರನ್ನು ಸನ್ಮಾನಿಸಿದ್ದೇನೆ ಎಂದರು.